ತೆಲುಗು ಟೈಟಾನ್ಸ್, ಹರಿಯಾಣ ಸ್ಟೀಲರ್ಸ್ ತಂಡಗಳಿಗೆ ಜಯ
ಬೆಂಗಳೂರು, ಅಕ್ಟೋಬರ್ 11: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ 12 ಮತ್ತು 13ನೇ ಪಂದ್ಯಗಳಲ್ಲಿ ಅನುಕ್ರಮವಾಗಿ ಹರಿಯಾಣ ಸ್ಟೀಲರ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಜಯ ಗಳಿಸಿವೆ.
ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ತಮಿಳು ತಲೈವಾಸ್ ವಿರುದ್ಧ 27-22 ಅಂಕಗಳ ಅಂತರದಲ್ಲಿ ಜಯ ಗಳಿಸಿದರೆ ದಿನದ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 30-21 ಅಂತರದಲ್ಲಿ ಪಾಟ್ನಾ ಪೈರೇಟ್ಸ್‌ಗೆ ಸೋಲುಣಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಟೈಟಾನ್ಸ್ ತಂಡದ ಪರ ಮನು ಗೋಯತ್ ಅವರು ರೈಡಿಂಗ್‌ನಲ್ಲಿ ಸೂಪರ್ 10 ಸಾಧನೆ ಮಾಡುವ ಮೂಲಕ ತಂಡಕ್ಕೆ ಋತುವಿನ ಮೊದಲ ಜಯ ತಂದಿತ್ತರು. ಪಾಟ್ನಾ ಪೈರೇಟ್ಸ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಸಮಬಲದ ಫಲಿತಾಂಶ ಕಂಡಿದೆ.
ಪ್ರಥಮಾರ್ಧದಲ್ಲಿ ಟೈಟಾನ್ಸ್ ಮುನ್ನಡೆ: ಸಿದ್ಧಾರ್ಥ್ ದೇಸಾಯಿ ಹಾಗೂ ಮನು ಗೋಯತ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ತೆಲುಗು ಟೈಟಾನ್ಸ್ ತಂಡ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 21-13 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಸಿದ್ಧಾರ್ಥ್ 6 ಮತ್ತು ಮನು 8 ಅಂಕಗಳನ್ನು ಗಳಿಸಿ ತಂಡದ ಬೃಹತ್ ಮುನ್ನಡೆಗೆ ನೆರವಾದರು. ನಾಯಕ ಸುರ್ಜಿತ್ ಸಿಂಗ್ ಟ್ಯಾಕಲ್‌ನಲ್ಲಿ 2 ಅಂಕಗಳನ್ನು ಗಳಿಸಿದರು.
ಒಂದು ಬಾರಿ ಆಲೌಟ್ ಆಗುವ ಮೂಲಕ ಹಿನ್ನಡೆ ಕಂಡ ಪಾಟ್ನಾ ಪೈರೇಟ್ಸ್ ಮತ್ತೆ ಚೇತರಿಸಿಕೊಳ್ಳಲಿಲ್ಲ, ರೋಹಿತ್ ಗೂಲಿಯಾ ಮತ್ತು ಸಚಿನ್ ತಲಾ 4 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಉತ್ತಮ ಪೈಪೋಟಿ ನೀಡಿದ್ದರು. 9-9 ಸಮಬಲದ ನಂತರ ಪಾಟ್ನಾ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಯಿತು.
ಹರಿಯಾಣ ಸ್ಟೀಲರ್ಸ್‌ಗೆ ಜಯ: ಮಂಜಿತ್ ಅವರ ರೈಡಿಂಗ್ (8 ಅಂಕಗಳು) ಹಾಗೂ ಜೈದೀಪ್ ದಹಿಯಾ ಅವರ ಟ್ಯಾಕಲ್ (5 ಅಂಕಗಳು) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ತಮಿಳು ತಲೈವಾಸ್ ವಿರುದ್ಧ 27-22 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.
ಈ ಜಯದೊಂದಿಗೆ ಸ್ಟೀಲರ್ಸ್ ಸತತ ಎರಡನೇ ಜಯ ದಾಖಲಿಸಿದರೆ, ತಮಿಳು ತಲೈವಾಸ್ ಸತತ ಎರಡನೇ ಸೋಲನುಭವಿಸಿತು. ಪ್ರಥಮಾರ್ಧಲ್ಲಿ ಸ್ಟೀಲರ್ಸ್ ಪಡೆ ತಲೈವಾಸ್ ತಂಡವನ್ನು ಒಂದು ಬಾರಿ ಆಲೌಟ್ ಮಾಡುವ ಮೂಲಕ 15-10 ಅಂತರದಲ್ಲಿ ಮೇಲುಗೈ ಸಾಧಿಸಿತ್ತು. ಡಿಫೆಂಡರ್‌ಗಳು ಉತ್ತಮ ಆಟವಾಡಿದ ಪರಿಣಾಮ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಗಳಿಸಿ ಯಶಸ್ಸಿನ ಹಾದಿ ತುಳಿದಿತ್ತು. ಮೊದಲಾರ್ಧದ ಮುನ್ನಡೆಯನ್ನೇ ಕಾಯ್ದುಕೊಂಡ ಸ್ಟೀಲರ್ಸ್ ದ್ವಿತಿಯಾರ್ಧದಲ್ಲೂ ಅದೇ 5 ಅಂಕಗಳ ಅಂತರದಲ್ಲಿ ಜಯ ಗಳಿಸಿರುವುದು ವಿಶೇಷವಾಗಿತ್ತು.
ನಾಯಕ ಪವನ್ ಶೆರಾವತ್ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದಿರುವುದು ತಮಿಳು ತಲೈವಾಸ್ ತಂಡದ ಸೋಲಿಗೆ ಕಾರಣವಾಗಿತ್ತು. ಅತ್ಯಂತ ದುಬಾರಿ ಬೆಲೆಯಲ್ಲಿ ಶೆರಾವತ್ ಅವರನ್ನು ಖರೀದಿಸಿದ ತಮಿಳ್ ತಲೈವಾಸ್ ಕೋಚ್ ಹಲವು ಬಾರಿ ಆಟಗಾರರನ್ನು ಬದಲಾಯಿಸುವ ಪ್ರಯೋಗ ಮಾಡಿದರೂ ಪ್ರಯೋಜನವಾಗಲಿಲ್ಲ. ಒಂದೆಡೆ ರೈಡರ್‌ಗಳು ವೈಫಲ್ಯಗೊಳ್ಳುತ್ತಿರುವಾಗ ಡಿಫೆಂಡರ್‌ಗಳು ತಂಡದ ಘನತೆ ಕಾಪಾಡಿದರು. ನಾಯಕ ಸಾಗರ್ ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಗಳಿಸಿ ತನ್ನ ಜವಾಬ್ದಾರಿಯ ಆಟ ಪ್ರದರ್ಶಿಸಿದರು. ಹಿಮಾಂಶು ಮತ್ತು ಸಾಹಿಲ್ ಗೂಲಿಯಾ ಟ್ಯಾಕಲ್‌ನಲ್ಲಿ ತಲಾ 3ಅಂಕಗಳನ್ನು ಗಳಿಸಿ ತಂಡ ದಿಟ್ಟ ಹೋರಾಟ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು.
You must be logged in to post a comment.