ಭಾರತದ ಸದ್ಯದ ಆರ್ಥಿಕ ಪರಿಸ್ಥಿತಿ...

Indian Economy

Featured Image Source : Daily Excelsior

ಭಾರತದ ಸದ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ?

 

ಆತಂಕಕಾರಿಯೇ ? ಸಮಾಧಾನಕರವೇ ? 

ಉತ್ತಮವೇ ?

 

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ಭವಿಷ್ಯದ ಮುನ್ಸೂಚನೆ ಕೊಡುವ ಏಜೆನ್ಸಿಗಳು, ಭಾರತದ ರಿಸರ್ವ್ ಬ್ಯಾಂಕ್, ಆರ್ಥಿಕ ತಜ್ಞರು ಮುಂತಾದವರ ಅಧೀಕೃತ ಹೇಳಿಕೆಗಳು, ಭಾರತದ ಜಿಡಿಪಿ, ಉತ್ಪಾದನಾ ವಲಯ, ಸೇವಾ ವಲಯ, ಷೇರು ಮಾರುಕಟ್ಟೆ, ರೂಪಾಯಿ ಮೌಲ್ಯ, ಬೆಲೆ ಏರಿಕೆ, ಹಣದುಬ್ಬರ ಮುಂತಾದ ಅಂಕಿಅಂಶಗಳು ಹೀಗೆ ಆರ್ಥಿಕ ಅಭಿವೃದ್ಧಿಯ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಬಹುದಾದ ಒಂದು ಅಭಿಪ್ರಾಯ. ಮತ್ತೊಂದು ಈ‌ ದೇಶದ ಒಬ್ಬ ‌ಸಾಮಾನ್ಯ ಪ್ರಜೆಯಾಗಿ ಯಾವುದೇ ಪಕ್ಷದ ಪರವಾದ ನಿಲುವುಗಳಿಲ್ಲದೆ, ಯಾವುದೇ ಆರ್ಥಿಕ ಅಧ್ಯಯನ ಚಿಂತನೆಗಳಿಲ್ಲದೆ ಸಹಜವಾಗಿ ದಿನನಿತ್ಯದ ಆಗುಹೋಗುಗಳನ್ನು ಗಮನಿಸಿ ಅನುಭವದ ಆಧಾರದ ಮೇಲೆ ರೂಪಿಸಿಕೊಂಡಿರುವ ಮತ್ತೊಂದು ಸಹಜ ಸ್ವಾಭಾವಿಕ ಅಭಿಪ್ರಾಯ.......

 

ಆರ್ಥಿಕ ತಜ್ಞರಿಂದ  ಮಾಧ್ಯಮಗಳಲ್ಲಿ ಆಗಾಗ ಎರಡೂ ರೀತಿಯ ಒಂದಷ್ಟು ಅಭಿಪ್ರಾಯಗಳು ಬರುತ್ತಿರುತ್ತದೆ. ಒಮ್ಮೆ ಅತ್ಯಂತ ಆತಂಕಕಾರಿ ಎಂದರೆ ಮತ್ತೊಮ್ಮೆ ‌ಇತರ ದೇಶಗಳಿಗೆ ಹೋಲಿಸಿಕೊಂಡು ಸಮಾಧಾನಕರ ಎಂದರೆ ಮಗದೊಮ್ಮೆ ಅತ್ಯುತ್ತಮ ಎಂದೂ‌ ಹೇಳಲಾಗುತ್ತದೆ.

 

ಹಾಗಾದರೆ ವಾಸ್ತವ.......

 

ಇದನ್ನು ಯೋಚಿಸುವ ಮೊದಲು ನೀವು ಪಕ್ಷಾತೀತ ಮನೋಭಾವ ಮತ್ತು ಭಾರತದ ಮೇಲಿನ ನಿಜವಾದ ಪ್ರೀತಿಯ ಮನಸ್ಥಿತಿಯನ್ನು ಉಳಿಸಿಕೊಂಡಿರಬೇಕು. ಆ ರೀತಿಯ ನಿಷ್ಕಲ್ಮಶ ಮನಸ್ಸು ಮಾತ್ರ ವಾಸ್ತವವನ್ನು ಸರಿಯಾಗಿ ಗ್ರಹಿಸಲು ಸಾಧ್ಯ.....

 

ದ್ವೇಷ ಅಸೂಯೆ ಕಪಟತನ ಆಂಧ ಶ್ರದ್ಧೆ ಉಡಾಫೆ ಭಾವುಕತೆ ಮುಂತಾದ ಸಂಕುಚಿತ ಮನಸ್ಥಿತಿ ನಮ್ಮ ಜ್ಞಾನಕ್ಕೆ ಮಿತಿಯನ್ನು ವಿಧಿಸುತ್ತದೆ. ಅದು ಇತರರ ತಪ್ಪುಗಳನ್ನು ಹುಡುಕುತ್ತಾ ತನ್ನ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾ ವಾಸ್ತವದಿಂದ ತುಂಬಾ ದೂರ ಸರಿಯುತ್ತದೆ......

 

ಆದ್ದರಿಂದ ಮುಕ್ತವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಯೋಚಿಸಿದಾಗ........

 

ಕಾರಣ ಏನೇ ಇರಲಿ ಯಾರೇ ಆಗಿರಲಿ ಸಮಗ್ರವಾಗಿ ಭಾರತೀಯ ಆರ್ಥಿಕತೆ ಗಮನಿಸಿದರೆ ಶ್ರೀಸಾಮಾನ್ಯರ ದೃಷ್ಟಿಯಿಂದ ಸದ್ಯಕ್ಕೆ ಆತಂಕಕಾರಿ ಎಂದು ಅನಿಸುತ್ತದೆ. ದಿನದಂದು ದಿನಕ್ಕೆ ಏರಿಕೆಯಾಗುತ್ತಲೇ ಇರುವ ಅಗತ್ಯ ವಸ್ತುಗಳ ಬೆಲೆ, ಹೆಚ್ಚಾಗುತ್ತಿರುವ ನಮ್ಮ ನಿರ್ವಹಣೆಯ ಖರ್ಚುಗಳು, ಕಡಿಮೆಯಾಗುತ್ತಿರುವ ಆದಾಯ, ನಮ್ಮ ಸುತ್ತಮುತ್ತಲಿನ ಜನಗಳು ಬಾಡಿಗೆ ವಿದ್ಯುತ್ ನೀರು ಆರೋಗ್ಯ ಶಿಕ್ಷಣ ಮುಂತಾದ ವಿಷಯಗಳ ಹಣಕಾಸಿನ ಪೂರೈಕೆಗಾಗಿ ಒದ್ದಾಡುತ್ತಿರುವುದು, ಗೆಳೆಯರು ಸಂಬಂಧಿಕರನ್ನು ಹಣಕ್ಕಾಗಿ ಪೀಡಿಸುತ್ತಿರುವುದು, ಹಣಕಾಸಿನ ವಿಷಯಕ್ಕಾಗಿ ಸಾಕಷ್ಟು ಸಂಬಂಧಗಳು ಬಿರುಕು ಮೂಡುತ್ತಿರುವುದು ಮತ್ತು ಹಾಳಾಗುತ್ತಿರುವುದು, ಆರ್ಥಿಕ ಕಾರಣಗಳಿಗಾಗಿ ಜಗಳ ಕಳ್ಳತನ ಆತ್ಮಹತ್ಯೆ, ಭವಿಷ್ಯದ ಬಗ್ಗೆ ಸಾಮಾನ್ಯ ಜನರ ನಿರುತ್ಸಾಹ, ಹಿಂದಿನ ಬದುಕಿನ ಬಗ್ಗೆ ಹೆಮ್ಮೆ, ನಿರುದ್ಯೋಗ, ಪಕ್ಕದ ದೇಶಗಳ ಅರಾಜಕತೆಯಿಂದ ನಮ್ಮ ಒಳ ಮನಸ್ಸುಗಳ ಭಯ ಹೀಗೆ ಅನೇಕ ವಿಷಯಗಳು ಆತಂಕಕಾರಿ ಎಂಬುದನ್ನು ದೃಢಪಡಿಸುತ್ತದೆ.

 

ಒಟ್ಟು ತೆರಿಗೆ ಸಂಗ್ರಹ, ಜಿಡಿಪಿಯ ಬೆಳವಣಿಗೆಯ ವೇಗ ಮತ್ತು ಸಂಖ್ಯೆ, ಬೃಹತ್ ಕಂಪನಿಗಳ ಲಾಭದ ಪ್ರಮಾಣ, ವಿಶ್ವದ ಇತರ ಕೆಲವು ದೇಶಗಳ ಆರ್ಥಿಕ ಅಭಿವೃದ್ಧಿಯ ಹೋಲಿಕೆ, ದೇಶದ ಕೆಲವೇ ವ್ಯಕ್ತಿಗಳ ಶ್ರೀಮಂತಿಕೆಯಲ್ಲಿ ಹೆಚ್ಚಳ, ಷೇರು ಮಾರುಕಟ್ಟೆಯ ಜಿಗಿತ ಮುಂತಾದ ಅಂಶಗಳನ್ನು ಗಮನಿಸಿದಾಗ ಸ್ವಲ್ಪ ಮಟ್ಟಿಗೆ ಸಮಾಧಾನಕರ ಎಂದೂ ಭಾಸವಾಗುತ್ತದೆ.

 

ಯಾರು ಎಷ್ಟೇ ಪ್ರಕಾಂಡ ಪಂಡಿತರಾಗಿದ್ದರು ಭವಿಷ್ಯವನ್ನು ಊಹಿಸಬಹುದೇ ಹೊರತು ಖಚಿತವಾಗಿ ಆಗಬಹುದಾದ ಬದಲಾವಣೆಗಳನ್ನು ಗುರುತಿಸುವುದು ತುಂಬಾ ಕಷ್ಟ ಮತ್ತು ಅದು ಸಾಧ್ಯತೆಗಳು ಮಾತ್ರ.

 

ಸಾಮಾನ್ಯ ಜನರಾದ ನಾವುಗಳು ಈಗ ನಮ್ಮ ಆರ್ಥಿಕ ಚಟುವಟಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅತಿಯಾದ ದುಂದು ವೆಚ್ಚ ಮುಂದೆ ತೊಂದರೆಗೆ ಕಾರಣವಾಗಬಹುದು. ಕೊರೋನಾ ನಂತರದ ಬದುಕು ಇನ್ನೂ ಸಂಪೂರ್ಣ ಚೇತರಿಕೆಯ ಹಂತ ತಲುಪಿಲ್ಲ. ಸಹಜವಾಗಿ ಆಡಳಿತ ಪಕ್ಷಗಳು ಅತ್ಯಂತ ಭರವಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ನಿರಾಸೆ ವ್ಯಕ್ತಪಡಿಸುತ್ತವೆ. ಆದರೆ ನಾವುಗಳು ಮಾತ್ರ ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಏಕೆಂದರೆ ಇನ್ನೂ ರಷ್ಯಾ ಮತ್ತು ಉಕ್ರೇನ್ ಯುದ್ಧ ನಡೆಯುತ್ತಲೇ ಇದೆ. ಮೂರನೇ ಮಹಾಯುದ್ಧದ ಕಾರ್ಮೋಡ ನಮ್ಮ ತಲೆಯ ಮೇಲೆ ಹರಿದಾಡುತ್ತಲೇ ಇದೆ.

 

ಜೊತೆಗೆ ದಯವಿಟ್ಟು ಬೆಲೆ ಏರಿಕೆ, ಭ್ರಷ್ಟಾಚಾರ, ಅವ್ಯವಸ್ಥೆ ಮುಂತಾದ ವಿಷಯಗಳಲ್ಲಿ ‌ಯಾವುದೇ ಸರ್ಕಾರ ಇದ್ದರೂ ಸಹ ಅವಕಾಶ ಸಿಕ್ಕಾಗ ನಮ್ಮ ಧ್ವನಿ ವ್ಯವಸ್ಥೆಯ ವಿರುದ್ಧ ಇರಲಿ. ಅದು ಪ್ರತಿ ನಾಗರಿಕರ ಹಕ್ಕು ಮತ್ತು ಕರ್ತವ್ಯ. ಇಲ್ಲದಿದ್ದರೆ ಆಡಳಿತ ಮಾಡುವವರು ಬೇರೆ ವಿಷಯಗಳನ್ನು ಪ್ರಸ್ತಾಪಿಸಿ ನಿಜವಾದ ಸಮಸ್ಯೆಗಳನ್ನು ಮರೆಮಾಚಲು ಪ್ರಯತ್ನಿಸುವರು. ನಮ್ಮ ಒಳ ಮನಸ್ಸುಗಳ ಎಚ್ಚರಿಕೆಯ ಗಂಟೆ ಸದಾ ಮೊಳಗುತ್ತಿರಲಿ ಎಂದು ಎಚ್ಚರಿಸುತ್ತಾ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

Related Articles
About Author