ಕೌಟಿಲ್ಯನ ಅರ್ಥಶಾಸ್ತ್ರ....

The Economics of Kautilya

Featured Image Source: Khan Study

ಕೌಟಿಲ್ಯ ಎಂಬ ಚಾಣಕ್ಯ ತನ್ನ " ಅರ್ಥಶಾಸ್ತ್ರ " ಎಂಬ ರಾಜಕೀಯ ಮತ್ತು ಆಡಳಿತಾತ್ಮಕ ನೀತಿಶಾಸ್ತ್ರದಲ್ಲಿ ಯುದ್ದ ನೀತಿಯ ಬಗ್ಗೆ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾನೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಒಕ್ಕೂಟವಾದ ನ್ಯಾಟೋ ನಡೆ ಬಹುತೇಕ ಅದರ ಅನುಕರಣೆಯಂತೆ ಭಾಸವಾಗುತ್ತಿದೆ. 

 

ಚಾಣಕ್ಯ ವಿದೇಶಾಂಗ ನೀತಿಯ ಭಾಗವಾಗಿ ನೆರೆಹೊರೆಯ ದೇಶಗಳ ಮಿತ್ರತ್ವ ಮತ್ತು ಶತ್ರುತ್ವಗಳ ಒಂದು ಸಿದ್ದಾಂತವನ್ನು ತನ್ನದೇ ರೀತಿಯಲ್ಲಿ ಆಗಿನ ಕಾಲದಲ್ಲಿಯೇ ವಿವರಿಸುತ್ತಾನೆ. ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟು ಅದರಲ್ಲಿ ಯಶಸ್ವಿಯಾದ ಮಹಾನ್ ಹೋರಾಟಗಾರರ ಚಾಣಕ್ಯ. ಆತನ ಚಿಂತನೆಗಳು ಒಣ ವೇದಾಂತಗಳಲ್ಲ. ಅನುಭವದ ರಸಪಾಕ.  " ಶತ್ರುವಿನ ಶತ್ರು ಮಿತ್ರ " ಎಂಬುದು ಇದರ ಒಳ ಸಾರಾಂಶ.

 

ಒಂದೇ ದೇಶವಾಗಿದ್ದ ಸೋವಿಯತ್ ಯೂನಿಯನ್ ಒಕ್ಕೂಟದ ಭಾಗವಾಗಿದ್ದ ರಷ್ಯಾ ಮತ್ತು ಉಕ್ರೇನ್ ಬೇರೆ ದೇಶಗಳಾಗಿ ವಿಭಜನೆಯಾಗುತ್ತದೆ. ಒಂದು ಕಾಲದಲ್ಲಿ ಶೀತಲ ಸಮರದ ಅವಧಿಯಲ್ಲಿ ತನ್ನ ಪ್ರಬಲ ಶತ್ರು ದೇಶವಾಗಿದ್ದ ರಷ್ಯಾವನ್ನು ಅಂತರರಾಷ್ಟ್ರೀಯವಾಗಿ ನಿಯಂತ್ರಿಸಲು ಅಮೆರಿಕ ಸದಾ ಹೊಂಚು ಹಾಕುತ್ತಿರುತ್ತದೆ. ಹಾಗೆಯೇ ರಷ್ಯಾ ಸಹ ಸಮಯ ಕಾಯುತ್ತಿರುತ್ತದೆ. ಅಮೆರಿಕದ ವಿರೋಧಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತದೆ.

 

ಇಂತಹ ಸಂದರ್ಭದಲ್ಲಿ ಉಕ್ರೇನ್ ದೇಶಕ್ಕೆ ವ್ಲಾಡಿಮಿರ್ ಝೆಲೆನ್ಸ್ಕಿ ಎಂಬ ಜನಪ್ರಿಯ ಹಾಸ್ಯ ಕಲಾವಿದ ಅತಿಹೆಚ್ಚು ಮತ ಪಡೆದು ಅಧ್ಯಕ್ಷನಾಗಿ ಆಯ್ಕೆಯಾಗುತ್ತಾನೆ. 

 

ಈತ ಮೂಲಭೂತವಾಗಿ ರಷ್ಯಾದ ವಿರುದ್ಧದ ಮನೋಭಾವ ಮತ್ತು ಅಮೆರಿಕ ಪರವಾದ ಒಲವು ನಿಲುವು ಹೊಂದಿರುತ್ತಾನೆ. ಬಹುಶಃ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕಾರಿ ಒತ್ತಡ ಆತನ ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಪರಿಸ್ಥಿತಿ ನಿರ್ಮಾಣ ಮಾಡಿರಬೇಕು.

 

ಇದನ್ನು ಮನಗಂಡ ಅಮೆರಿಕ ತನ್ನ ರಕ್ಷಣಾ ಒಕ್ಕೂಟ ನ್ಯಾಟೋಗೆ ಉಕ್ರೇನ್ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ. ಇದರ ಸುಳಿವರಿತ ರಷ್ಯಾ ತನ್ನ ಭದ್ರತೆಗೆ ಅಪಾಯ ಎಂದು ಪರಿಗಣಿಸಿ ಉಕ್ರೇನ್ ಮೇಲೆ ಯುದ್ಧ ಸಾರುತ್ತದೆ.

 

ಒಂದು ಕಾಲದಲ್ಲಿ ಅಮೆರಿಕದ ಶತ್ರು ದೇಶವಾಗಿದ್ದ ಸೋವಿಯತ್ ಯೂನಿಯನ್ ನ‌ ಎರಡು ರಾಷ್ಟ್ರಗಳು ತಮ್ಮ ನಡುವೆಯೇ ಯುದ್ದಕ್ಕೆ ಇಳಿದಾಗ ಅಮೆರಿಕ ಚಾಣಕ್ಯನ ನೀತಿಯ ಜಾರಿಗೆ ಒಳ ನುಸುಳುತ್ತದೆ. ತನ್ನ ‌ಶತ್ರು ರಷ್ಯಾದ ಶತ್ರುವಾದ ಉಕ್ರೇನ್ ಅಮೆರಿಕದ ಮಿತ್ರ ‌ದೇಶವಾಗುತ್ತದೆ. ಯುದ್ಧ ನಡೆಯುವುದು ತನ್ನ ಒಂದು ಕಾಲದ ಶತ್ರುಗಳ ನಡುವೆ. 

 

ಈಗ ಅಮೆರಿಕ ಈ ಯುದ್ದ ನಿಲ್ಲಿಸುವ ಯಾವುದೇ ಪ್ರಯತ್ನ ಮಾಡದೆ, ನೇರವಾಗಿ ಉಕ್ರೇನ್ ಪರವಾಗಿ ಯುದ್ದಕ್ಕೆ ನಿಲ್ಲದೆ ಹಿನ್ನೆಲೆಯಲ್ಲಿ ನಿಂತು ಉಕ್ರೇನ್ ಗೆ ಎಲ್ಲಾ ರೀತಿಯ ಬೆಂಬಲ ಕೊಡುತ್ತದೆ. ಈ ಬೆಂಬಲ ಉಕ್ರೇನ್ ಜನರ ಹೆಣಗಳ ರಾಶಿಯ ಮೇಲೆ ಎಂಬ ಒಳ ಸತ್ಯ ಮರೆಯಬಾರದು. 

 

ಹಾಗೆಯೇ ಇದು ಇಲ್ಲಿಗೇ ನಿಲ್ಲುವುದಿಲ್ಲ ಅಥವಾ ನಿಲ್ಲಲು ಬಿಡುವುದಿಲ್ಲ. ಈ ಯುದ್ಧ ವಾಸ್ತವದಲ್ಲಿ ನಡೆಯುತ್ತಿರುವುದು ಉಕ್ರೇನ್ ನೆಲದಲ್ಲಿ. ಏನೇ ದೊಡ್ಡ ಅನಾಹುತ ಆದರೂ ಅದಕ್ಕೆ ಉಕ್ರೇನ್ ಬಲಿಯಾಗುತ್ತದೆ. ಅದಕ್ಕೆ ಕಾರಣ ರಷ್ಯಾ ಆಗುತ್ತದೆ. ಎರಡೂ ದೇಶಗಳ ಮೇಲೆ ಅಪಾಯದ ತೂಗು ಕತ್ತಿ ಇರುತ್ತದೆ.

 

ಜೊತೆಗೆ ಈ ಯುದ್ಧ ದೀರ್ಘಕಾಲ ನಡೆಯುವಂತೆ ಮತ್ತು ಉಕ್ರೇನ್ ಪರೋಕ್ಷವಾಗಿ ಸಂಪೂರ್ಣ ಸೋಲದಂತೆ ಎಲ್ಲಾ ರೀತಿಯ ಯುದ್ಧೋಪಕರಣ ನೀಡಿ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿಯನ್ನು ಪ್ರಚೋದಿಸುತ್ತಾ ಸಾಧ್ಯವಾದಷ್ಟು ದೀರ್ಘ ಅವಧಿಗೆ ಎಳೆದರೆ ರಷ್ಯಾದ ಸೈನ್ಯ, ಅಲ್ಲಿನ ಆರ್ಥಿಕ ಪರಿಸ್ಥಿತಿ, ಜನರ ಮಾನಸಿಕ ಪರಿಸ್ಥಿತಿ ಸಹಜವಾಗಿ ಬಸವಳಿದು ಒಂದಷ್ಟು ದುರ್ಬಲವಾಗುತ್ತದೆ. ಆ ಸಮಯವನ್ನು ಉಪಯೋಗಿಸಿಕೊಂಡು ರಷ್ಯಾವನ್ನು ಮತ್ತಷ್ಟು ದುರ್ಬಲ ಗೊಳಿಸುವ ತಂತ್ರಗಾರಿಕೆಯನ್ನು ತಾಳ್ಮೆಯಿಂದ ನಿರ್ವಹಿಸುವ ಚಾಣಕ್ಯ ನೀತಿ ಇಲ್ಲಿ ಕಂಡುಬರುತ್ತಿದೆ. 

 

ಈಗಾಗಲೇ ಈ ಯುದ್ದವನ್ನು ದೀರ್ಘಕಾಲ ಎಳೆಯುತ್ತಾ, ನ್ಯಾಟೋ ಒಕ್ಕೂಟದೊಂದಿಗೆ ಸೇರಿ ಮೂರನೇ ಮಹಾಯುದ್ಧದ ಸಿದ್ಧತೆಯಲ್ಲಿ ಅಮೆರಿಕ ನೇತೃತ್ವದ ಪಡೆ ತೊಡಗಿದೆ. ರಷ್ಯಾ ಇನ್ನಷ್ಟು ದುರ್ಬಲವಾಗುವುದನ್ನು ಕಾಯುತ್ತಾ ಕುಳಿತಿದೆ.

 

ಯುದ್ಧ ಎಷ್ಟೇ ಘನಘೋರವಾದರೂ ಅದರ ಬಹುತೇಕ ಕಷ್ಟ ನಷ್ಟಗಳು ರಷ್ಯಾ ಮತ್ತು ಉಕ್ರೇನ್ ನೆಲದಲ್ಲಿಯೇ ಸಂಭವಿಸಬೇಕು ಅಲ್ಲಿಂದ ಆಚೆ ಬರಬಾರದು ಎಂಬ ರಣತಂತ್ರ ಸಹ ಇದರಲ್ಲಿ ಅಡಗಿರುವ ಸಾಧ್ಯತೆ ಇದೆ.

 

ಹಾಗೆಂದು ಇದು ರಷ್ಯಾ ಪರವಾದ ಲೇಖನವಲ್ಲ. ರಷ್ಯಾದ ಅಧ್ಯಕ್ಷ ಪುಟಿನ್ ಒಂದು ಕೆಟ್ಟ ಸರ್ವಾಧಿಕಾರಿ. ತನ್ನ ನೆರೆಯ ಸ್ವತಂತ್ರ ರಾಷ್ಟ್ರವನ್ನು ಮತ್ತು ಅಲ್ಲಿನ ಜನರ ವಿಶ್ವಾಸವನ್ನು ಗಳಿಸಲು ವಿಫಲವಾಗಿದ್ದಾನೆ. ತನ್ನ ಸೈನಿಕ ಶಕ್ತಿಯ ಅಹಂಕಾರದಿಂದ ಉಕ್ರೇನ್ ನ ಅಮಾಯಕ ಜನರ ಸಾವಿಗೆ ಕಾರಣವಾಗಿರುವುದಲ್ಲದೇ ತನ್ನದೇ ದೇಶದ ಜನರನ್ನು ಅತ್ಯಂತ ಅಪಾಯಕ್ಕೆ ಸಿಲುಕಿಸಿದ್ದಾನೆ. ಮೂರನೆಯ ಶಕ್ತಿಯೊಂದು ತನ್ನ ನೆಲಕ್ಕೆ ಪ್ರವೇಶಿಸಲು ಅವಕಾಶ ಕಲ್ಪಸಿದ್ದಾನೆ.

 

ಉಕ್ರೇನ್ ಮೇಲಿನ ಆತನ ದಾಳಿಯು ಇಲ್ಲಿಯವರೆಗೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಈಗ ಆತ ಹಿಂದಕ್ಕೂ ಸರಿಯಲು ಸಾಧ್ಯವಾಗದೆ ಹತಾಶನಾಗಿ ತನ್ನ ಬಳಿ ಇರುವ ಅಣುಬಾಂಬು ಮತ್ತು ಹೈಡ್ರೋಜನ್ ಬಾಂಬುಗಳ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದಾನೆ. ಅದನ್ನೇ ವಿಶ್ವಕ್ಕೆ ಬೆದರು ಬೊಂಬೆಯಾಗಿ ಪ್ರದರ್ಶಿಸುತ್ತಿದ್ದಾನೆ..

 

ಒಂದು ವೇಳೆ ರಷ್ಯಾ ಭೀಕರ ಬಾಂಬುಗಳನ್ನು ಉಕ್ರೇನ್ ಸೇರಿ ಬೇರೆ ದೇಶದ ಮೇಲೆ ಪ್ರಯೋಗಿಸಿ ಅಪಾರ ಪ್ರಾಣ ಹಾನಿ ಮಾಡಿದರೂ  ತಾನು ಸಹ ಅಣುಬಾಂಬಿನ ಹೊಡೆತಕ್ಕೆ ಸಿಲುಕುವುದಲ್ಲದೇ  ಬಹುತೇಕ ವಿನಾಶದ ಅಂಚಿಗೆ ಬಂದು ತಲುಪುತ್ತದೆ. ಇನ್ನೆಂದೂ ಈಗಿನಷ್ಟು ಪ್ರಬಲವಾಗಲು‌ ಸಾಧ್ಯವಿಲ್ಲ.

 

ಈ ನಡುವೆ ಉಕ್ರೇನ್ ಸಂಪೂರ್ಣ ನಾಶವಾಗಿರುತ್ತದೆ.

 

ಇದು ಮಾನವ ಸಮಾಜ. ಇಲ್ಲಿ ಪ್ರೀತಿ ಕರುಣೆ ದಯೆ ಕ್ಷಮಾಗುಣ ಉಪಕಾರ ಸಹಕಾರ ಮಾನವೀಯತೆ ಕೇವಲ ಒಣ ಉಪದೇಶಗಳು. ಇಲ್ಲಿ ಶಕ್ತಿ ‌ಸಾಮರ್ಥ್ಯ ಪ್ರತಿಷ್ಠೆ ಅಹಂಕಾರ ದರ್ಪ ದೌರ್ಜನ್ಯ ದುರ್ಬಲರ ಶೋಷಣೆ ಅಸೂಯೆ ಪಿತೂರಿ ಇವುಗಳೇ ವ್ಯಾವಹಾರಿಕ ಜಗತ್ತಿನಲ್ಲಿ ಮೇಲುಗೈ ಪಡೆಯುವುದು......

 

ಜಗತ್ತಿನ ಅಸಂಖ್ಯಾತ ಜನ ಯುದ್ಧದ ಭೀಕರ ಪರಿಣಾಮಗಳ ಅರಿವಿದ್ದರೂ, ಅದು ತನ್ನನ್ನೇ ಸುಡಬಹುದು ಎಂದು ತಿಳಿದಿದ್ದರೂ ಸದ್ಯಕ್ಕೆ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡದೆ ತಮ್ಮ ಪಾಡಿಗೆ ತಾವು ತಮ್ಮ ಕುಟುಂಬದ ಅಥವಾ ಬದುಕಿನ ಅನಿವಾರ್ಯ ಲಾಲನೆ ಪಾಲನೆಯ ಒತ್ತಡದಲ್ಲಿ ಮುಳುಗಿದ್ದಾರೆ. ಕೊಳ್ಳುಬಾಕ ಕಾರ್ಪೊರೇಟ್ ಸಂಸ್ಕೃತಿ ಮನುಷ್ಯನ ಸ್ಪಂದನೆಯ ಗುಣವನ್ನೇ ನಾಶ ಮಾಡಿ ಸ್ವಾರ್ಥ ಬೆಳೆಸಿದೆ. ಅದರ ಪರಿಣಾಮ ಮುಂದಿನ ದಿನಗಳಲ್ಲಿ.........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author