ಹೃದಯದ ವೈಶಾಲ್ಯತೆ.....

Vastness of heart

Featured Image Source : French Casino

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " 

      

       ಸ್ವಾಮಿ ವಿವೇಕಾನಂದ.......

 

ಜೊತೆಗೆ ಹೃದಯ ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ.....

 

ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು......

 

ನೀವು ಯಾವುದೇ ಕ್ಷೇತ್ರದಲ್ಲಿರಲಿ, ಎಷ್ಟೇ ಪ್ರತಿಭಾವಂತರಾಗಿರಿ ನಿಮ್ಮ ಹೃದಯ ವಿಶಾಲ ಮತ್ತು ಶುದ್ದವಾಗಿಲ್ಲದಿದ್ದರೆ ನೀವು ಎಷ್ಟೇ ಜನಪ್ರಿಯರಾಗಿರಿ, ಎಷ್ಟೇ ಶ್ರೀಮಂತರಾಗಿರಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಿ ನಿಮ್ಮ ಜ್ಞಾನ ಒಂದು ಮಿತಿಗೆ ಒಳಪಟ್ಟಿರುತ್ತದೆ. ಆ ಜ್ಞಾನ ಕೃತಕವಾಗಿರುತ್ತದೆಯೇ ಹೊರತು ಸಹಜವಾಗಿರುವುದಿಲ್ಲ. ಅದನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗದೆ ಇರಬಹುದು. ಆದರೆ ನಿಜವಾದ ಪ್ರಜ್ಞಾವಂತ ಖಂಡಿತ ಗ್ರಹಿಸಬಲ್ಲ.....

 

ಸಾಹಿತ್ಯ ಸಂಗೀತ ನೃತ್ಯ ಕಲೆ ವಿಜ್ಞಾನ ಯಾವುದೇ ಇರಲಿ ಸಂಕುಚಿತ ಮತ್ತು ಅಶುದ್ಧ ಮನೋಭಾವದ ವ್ಯಕ್ತಿಗಳ ಮನಸ್ಸು ಜ್ಞಾನದ ನೆಲೆಯಾಗಲು‌ ಸಾಧ್ಯವಿಲ್ಲ. ಅದು ತೋರಿಕೆಯ ಒಣ ಪ್ರದರ್ಶನ ಮಾತ್ರ.

 

ಉದಾಹರಣೆಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ,.......

 

ಸಾಹಿತ್ಯವೆಂಬ ಸಾಗರದಲ್ಲಿ ಈಜಾಡುತ್ತಾ,

ಅಕ್ಷರಗಳನ್ನು - ಭಾವನೆಗಳನ್ನು ಅರಿಯುತ್ತಾ,

ಓದುತ್ತಾ - ಬರೆಯುತ್ತಾ - ಗ್ರಹಿಸುತ್ತಾ,

ಅನುಭವದಲ್ಲಿ ಮೂಡಿದ ಕೆಲವೇ ಹನಿಗಳಂತ ಒಂದು ಅನಿಸಿಕೆ ಯುವ ಸಾಹಿತ್ಯದ ಬರಹಗಾರರಿಗಾಗಿ.......

 

ವಿದ್ಯೆಗೆ ವಿನಯವೇ ಭೂಷಣ.

ಅಕ್ಷರಗಳಲ್ಲ......

 

ಮನದ ಸಹಜ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಾಗ,

ಒಂದಷ್ಟು ಗಟ್ಟಿಯಾದ ಸಾಹಿತ್ಯ ಸೃಷ್ಟಿಯಾಗುತ್ತದೆ. 

ಅಕ್ಷರಗಳಲ್ಲಿಯೇ ಭಾವನೆಗಳನ್ನು ಕಲ್ಪಿಸಿಕೊಂಡು ಮೂಡಿಸಿದಾಗ, ಕೃತಕವಾದ ಬಾಲಿಶ ಸಾಹಿತ್ಯ ರಚನೆಯಾಗುವ ಸಾಧ್ಯತೆಯಿದೆ.

 

ಇವುಗಳ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಗೋಚರಿಸುತ್ತದೆ. 

ಬರಹಗಾರರು ಅರಿಯಬೇಕಾದ ಬಹುಮುಖ್ಯ ಅಂಶವಿದು.

 

ಸಾಹಿತ್ಯದ ಬಗ್ಗೆ ಮಾತನಾಡುವಾಗ ಗಟ್ಟಿ ಸಾಹಿತ್ಯ - ಜನಪ್ರಿಯ ಸಾಹಿತ್ಯ - ಜೊಳ್ಳು ಸಾಹಿತ್ಯ ಎಂದು ಗುರುತಿಸುವುದು ಇದೇ ದೃಷ್ಟಿಕೋನದಲ್ಲಿ.

 

ಸಿನಿಮಾಗಳಲ್ಲಿ ಬಳಸಲ್ಪಡುವ ಬಹುತೇಕ ಸಾಹಿತ್ಯ ( ಕೆಲವೊಂದು ಹೊರತು ಪಡಿಸಿ), ಸಂಗೀತ ಸಂಯೋಜನೆಯ ನಂತರ ಅದರ ಭಾವನೆಗಳಿಗೆ ತಕ್ಕಂತೆ ಅಕ್ಷರ ಜೋಡಿಸುವುದು, ಕೆಲವು ಭಾವಗೀತೆಗಳು, ಒಂದಷ್ಟು ಜನ ಕ್ರೇಜಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು, ಯಾರೋ ಎಲ್ಲೋ ಬರೆದ ಅಥವಾ ಎಂದೋ ಓದಿದ ಸಾಹಿತ್ಯವನ್ನು ಬರೆಯುವ ಕಲಿಯುವ ಆಸೆಯಿಂದ ವಾಕ್ಯ ರಚಿಸುವುದು. ಬರೆಯುವಾಗಲೇ ಮಹತ್ವಾಕಾಂಕ್ಷೆಯ ಮತ್ತು ಪ್ರಶಸ್ತಿ ಸನ್ಮಾನಗಳ ಗುಂಗಿನಲ್ಲಿ ಬರೆಯುವುದು, ಇತರರ ಮೆಚ್ಚುಗೆಗಾಗಿ ಅಕ್ಷರಗಳನ್ನು ಮೂಡಿಸುವುದು,  ಮುಂತಾದವು ಅಕ್ಷರದಿಂದ ಭಾವನೆಗಳನ್ನು ಮೂಡಿಸುವ ಸಾಹಿತ್ಯಕ್ಕೆ ಉದಾಹರಣೆಗಳು.

 

ಅದೇ ರೀತಿ ಕುವೆಂಪು, ಕಾರಂತ,ಬೇಂದ್ರೆ, ಮಾಸ್ತಿ, ಅಡಿಗ, ಬೈರಪ್ಪ, ಚಿತ್ತಾಲ, ತೇಜಸ್ವಿ, ದೇವನೂರು ಮುಂತಾದವರ ಸಾಹಿತ್ಯ, ಭಾವನೆಗಳಿಗೆ ಅಕ್ಷರ ರೂಪ ಕೊಡುವುದಕ್ಕೆ ಉದಾಹರಣೆಗಳು. ಅವರುಗಳು ತಮ್ಮ ಬದುಕಿನ ಅನುಭವದ - ಅರಿವಿನ - ಗ್ರಹಿಕೆಯ ವಿಷಯಗಳನ್ನು ಅಂತರಾಳದ ಭಾವನೆಗಳಿಗೆ ಅಕ್ಷರದ ರೂಪ ನೀಡುತ್ತಾರೆ.

 

 ಅದು ನಿಜವಾದ ಸಾಹಿತ್ಯಾಸಕ್ತರಿಗೆ ಗಾಡವಾದ ಅನುಭವ ನೀಡುತ್ತದೆ. ಅವರ ಚಿಂತನೆಗಳಲ್ಲಿ, ನಿರೂಪಣೆಯಲ್ಲಿ, ವಿಷಯಗಳಲ್ಲಿ, ಸಾಹಿತ್ಯದ ಪ್ರಕಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ಅನುಭವ ಸಾಹಿತ್ಯ ಅದಾಗಿರುತ್ತದೆ.

 

ಕೆಲಮೊಮ್ಮೆ ಅಪರೂಪಕ್ಕೆ ಇದಕ್ಕೆ ವಿರುಧ್ಧವಾದ ರೀತಿಯ ರಚನೆಗಳೂ ಸೃಷ್ಟಿಯಾಗಬಹುದು. ಅಂದರೆ ಭಾವನೆಗಳಲ್ಲಿ ಅತ್ಯುತ್ತಮ ಗಾಢತೆ ಇದ್ದರೂ ಅಕ್ಷರಗಳಲ್ಲಿ ಅವು ಪೇಲವವಾಗಿ ಮೂಡಬಹುದು ಹಾಗೆಯೇ ಅಕ್ಷರಗಳಿಂದಲೇ ಅತ್ಯುತ್ತಮ ಎನ್ನುವ ಭಾವನೆಗಳ ಸಾಹಿತ್ಯವೂ ರಚನೆಯಾಗಬಹುದು. ಕೆಲವು ಸಿನಿಮಾ ಹಾಡುಗಳಲ್ಲಿ ಇದು ಕಂಡುಬರುತ್ತದೆ.

ಆದರೆ ಇದು ಅತಿ ವಿರಳ.

 

ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ. 

 

ಇದೊಂದು ಸಣ್ಣ ಮತ್ತು ಸರಳ ಅನಿಸಿಕೆ ಅಷ್ಟೆ. ಸಾಹಿತ್ಯದ ಆಳದಲ್ಲಿ ಅಗಾಧ ನಿಗೂಡತೆ ಮತ್ತು ಕ್ರಿಯಾತ್ಮಕತೆ ಅಡಗಿದೆ. ಅದನ್ನು ಇಷ್ಟೇ ಎಂದು ಭಾವನೆಗಳಲ್ಲಿ - ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ.

 

" ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆ.( ಮಾತನಾಡುವವರಿಗೆ)

ಆ ಭಾಷೆಯಲ್ಲಿಯೇ ಮತ್ತೊಬ್ಬರ ಆತ್ಮವನ್ನೂ ಪ್ರವೇಶಿಸಬಹುದು.

ಆ ಆತ್ಮದೊಂದಿಗೆ ಬೆರೆತು ಸಂವಾದವನ್ನೂ ನಡೆಸಬಹುದು.

ಆ ಸಂವಾದದಲ್ಲಿ ಆತ್ಮದ ಐಕ್ಯವಾಗಬಹುದು.

ಹಾಗೇ ಆತ್ಮಮಿಲನವಾದ ಸಂಬಂಧಗಳನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ.

 

ಇದು ಅಕ್ಷರಗಳಲ್ಲಿ ಮೂಡಿದ ಭಾವನೆಯಲ್ಲ,

ಒಡಲಾಳದ ಭಾವನೆಗಳಿಗೆ ನೀಡಿದ ಅಕ್ಷರ ರೂಪ.

 

ಸಂಕುಚಿತ ಮನೋಭಾವದ ಅಸಭ್ಯತೆ ಕುಹುಕು ವ್ಯಂಗ್ಯ ಎಲ್ಲವೂ ಹೇಳುವವನ ಯೋಗ್ಯತೆಯನ್ನು ತೋರಿಸುತ್ತದೆಯೇ ಹೊರತು ಕೇಳಿಸಿಕೊಂಡವನ ಯೋಗ್ಯತೆಯನ್ನಲ್ಲ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ......

 

ಒಟ್ಟಿನಲ್ಲಿ ಯಾವುದೇ ಕ್ಷೇತ್ರದ ಜ್ಞಾನದ ಮೂಲ ಹೃದಯ ವೈಶಾಲ್ಯತೆ ಮತ್ತು ಶುದ್ಧತೆ ಎಂಬುದು ವಾಸ್ತವ ಸತ್ಯ. ಇದು ಎಲ್ಲರ ಮನದ ಮೂಲೆಯಲ್ಲಿ ಸದಾ ನೆನಪಾಗಿರಲಿ ಎಂದು ಆಶಿಸುತ್ತಾ.......

 

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068............

Enjoyed this article? Stay informed by joining our newsletter!

Comments

You must be logged in to post a comment.

About Author