ಖೈದಿಯೊಬ್ಬನ ಅಂತರಂಗ......

Unveiling the innermost feelings of a prisoner .....

Featured Image Credits : HASTAC

 

ಖೈದಿಯೊಬ್ಬನ ಅಂತರಂಗ..........

 

ಹೆಸರು : ೧೩೫೦..........

 

ಜೈಲಿನ ಸಿಬ್ಬಂದಿಯೊಬ್ಬ ಜೋರಾಗಿ ಕೂಗಿದ.

 

ಬೆಳಗಿನ ೧೧ ರ ಸಂದರ್ಶನದ ಸಮಯದಲ್ಲಿ ಕಳೆದ ೪ ವರ್ಷಗಳಲ್ಲಿ ಎರಡನೇ ಬಾರಿಗೆ ನನ್ನ ಹೆಸರನ್ನು ಜೋರಾಗಿ ಕರೆಯಲಾಯಿತು.  ಬೆಳಗ್ಗೆ ಮತ್ತು ಸಂಜೆಯ ಹಾಜರಾತಿ ವೇಳೆ ನನ್ನ ಎದೆ ಮತ್ತು ಬೆನ್ನಿನ ಮೇಲಿರುವ ೧೩೫೦ ನಂಬರ್ ನನ್ನ ಹೆಸರೇ ಆಗಿತ್ತು. ಅಪರೂಪಕ್ಕೊಮ್ಮೆ ಜೈಲಿನ ವಾರ್ಡನ್ ಅಥವಾ ಸಹ ಖೈದಿಗಳು ಮಾತ್ರ ನಿಜ ಹೆಸರನ್ನು  ಕರೆಯುತ್ತಿದ್ದರು.

 

ಸರಳುಗಳ ಹಿಂದಿನ ಸಂದರ್ಶನಕರ ಕೊಠಡಿಯತ್ತ ಹೆಜ್ಜೆ ಹಾಕಿದೆ. ತಕ್ಷಣ ನನ್ನ ಪ್ರತಿಜ್ಞೆ ನೆನಪಾಯಿತು." ಈ ಜೀವನದಲ್ಲಿ ಇನ್ನೆಂದೂ ನಾನು ನನ್ನವರನ್ನು ನೋಡಬಾರದು." ಕಾಲುಗಳು ಅಲ್ಲಿಯೇ ನಿಂತವು. ದೇಹ ಹಿಂದಕ್ಕೆ ಚಲಿಸಿತು. ಅಲ್ಲಿಯೇ ಇದ್ದ ಜೈಲು ಪೋಲಿಸರಿಗೆ 

" ಇಲ್ಲ, ನಾನು ಯಾರನ್ನೂ ಭೇಟಿಯಾಗಲು ಇಚ್ಚಿಸುವುದಿಲ್ಲ " ಎಂದು ಹೇಳಿ ೫ ನೇ ಬ್ಯಾರಕ್ಕಿನ ನನ್ನ ರೂಮಿನೊಳಗೆ ನುಸುಳಿ ಕುಳಿತೆ.

 

ಬಂದಿದ್ದವರು ಯಾರೆಂದು ನನಗೆ ಸ್ಪಷ್ಟವಾಗಿ ತಿಳಿದಿದೆ. ದುರಾದೃಷ್ಟವೆಂದರೆ ಅದು ಯಾರು ಎಂದು ನಿಮ್ಮ ಬಳಿಯೂ ಹೇಳಿಕೊಳ್ಳಲಾರದಷ್ಟು ಅಸಹಾಯಕ ಸ್ಥಿತಿಯಲ್ಲಿದ್ದೇನೆ, ಮನಸ್ಸು ಒಪ್ಪಿದರೆ ಕೊನೆಯಲ್ಲಿ ಹೇಳುತ್ತೇನೆ......

 

ಅಪರಾಧ ಮಾಡಿ ಪೋಲೀಸರಿಗೆ ಶರಣಾಗಿ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ಚಾರ್ಜ್ ಷೀಟ್ ಸಲ್ಲಿಸಿದ ಕೆಲವೇ ದಿನಗಳಲ್ಲಿ ನ್ಯಾಯಾಧೀಶರ ಮುಂದೆ ನನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡು ಅವರ ಆದೇಶದಂತೆ ೧೪ ವರ್ಷಗಳ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಾನೇ ೧೩೫೦.

 

ಚಿಕ್ಕ ವಯಸ್ಸಿನಿಂದಲೇ ಮನೆ ಶಾಲೆ ಶಿಕ್ಷಣ ಶಿಕ್ಷಕರು ಪತ್ರಿಕೆ ಸಮುದಾಯ ಸಮಾಜದ ಆದರ್ಶಗಳಿಗೆ ಹೇಗೆ ಆಕರ್ಷಿತನಾದೆನೋ ಗೊತ್ತಿಲ್ಲ. ಪಠ್ಯ ಪುಸ್ತಕಗಳಲ್ಲಿ  ಓದಿದ ಹಿರಿಯರು ಹೇಳಿದ ಎಲ್ಲಾ ಮಾಹಾ ಪುರುಷರು -  ಘಟನೆಗಳು ಅದು ಇದ್ದಂತೆ ಸ್ವೀಕರಿಸಿದೆ. ನಾನು ಹಾಗೇ ಇರಬೇಕು - ಆಗಬೇಕು ಎಂದು ಕನಸು ಕಂಡೆ ಮತ್ತು ಹಠ ಮಾಡಿ ವಿದ್ಯಾರ್ಥಿ ಜೀವನವನ್ನೆಲ್ಲಾ ಹಾಗೆ ಕಳೆದೆ.

 

ಅದೇ ಸಮಯಕ್ಕೆ ಅನಿರೀಕ್ಷಿತ ಘಟನೆಗಳು ನಡೆದು ಇಡೀ ಕುಟುಂಬದ ಹೊರೆ ನನ್ನ ಹೆಗಲೇರಿತು. ಉದ್ಯೋಗದ ಬೇಟೆ ಶುರುವಾಯಿತು.

 

ಸಮಾಜದ ವಿವಿಧ ಮುಖಗಳ ಪರಿಚಯವಾಗತೊಡಗಿತು.

ಶಿಕ್ಷಣ ಸಂಸ್ಥೆಯಲ್ಲಿ ಕ್ಯಾಷಿಯರ್ ಆಗಿ, ಆಸ್ಪತ್ರೆಯಲ್ಲಿ ಸ್ವಾಗತಕಾರನಾಗಿ, ಸ್ವಯಂ ಸೇವಾ ಸಂಸ್ಥೆಯಲ್ಲಿ ಸಂಘಟಕನಾಗಿ, ಹಣಕಾಸು ಸಂಸ್ಥೆಯಲ್ಲಿ ಪ್ರತಿನಿಧಿಯಾಗಿ, ಮಠದಲ್ಲಿ ಅಟೆಂಡರ್ ಆಗಿ, ಶಾಸಕನೊಬ್ಬನ ಬಳಿ ವಿಶೇಷ ಸಹಾಯಕನಾಗಿ ಹೀಗೆ ಹಲವಾರು ಕೆಲಸಗಳನ್ನು ೧೦ ವರ್ಷಗಳ ಅವಧಿಯಲ್ಲಿ ಮಾಡಿದೆ. ಎಲ್ಲಿಯೂ ನೆಲೆ ನಿಲ್ಲಲು ನಾನು ಆದರ್ಶವೆಂದು ಭಾವಿಸಿದ್ದ ಮೌಲ್ಯಗಳು ಬಿಡಲಿಲ್ಲ. ಕೆಲವು ಕಡೆ ಸತ್ಯ ಹೇಳಿ ಹಲ್ಲೆಗೂ ಒಳಗಾದೆ. ಆದರೆ ಎಂದೂ ಪೋಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ. ಎಲ್ಲವನ್ನೂ ಸಹಿಸಿದೆ.

 

ಮುಂದೆ ಅಳಿದುಳಿದ ಹಣದಲ್ಲಿ ಸ್ವಂತ ಉದ್ಯೋಗ ಮಾಡತೊಡಗಿದೆ. ತರಕಾರಿ ಅಂಗಡಿ, ದಿನಸಿ ಸರಬರಾಜು, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಬ್ರೋಕರ್.....

 

ಇಲ್ಲ ಎಲ್ಲಿಯೂ ಗಿಟ್ಟಲಿಲ್ಲ. ಎಲ್ಲಾ ಕಡೆ ನಷ್ಟ. ಆದರೂ,

ಮನೆಯ ಜವಾಬ್ದಾರಿ ಹೇಗೋ ನಿಭಾಯಿಸಿ ಅದರಿಂದ ಮುಕ್ತನಾದೆ. ನನ್ನ ಅವಲಂಬಿತರು  ಎಲ್ಲರೂ ಅವರವರ ಪಾಡಿಗೆ  ಜೀವನ ಸಾಗಿಸುವ ಮಟ್ಟಿಗೆ ಸುಧಾರಿಸಿದರು. ನನ್ನ ಆದರ್ಶಗಳ ಹುಚ್ಚುತನಕ್ಕೆ ಬೇಸರ ಪಟ್ಟು ಅವರೆಲ್ಲರೂ ನನ್ನಿಂದ ದೂರವಾದರು‌.

 

ಆಗಲೇ ವಯಸ್ಸು ತುಂಬಾ ಆಗಿತ್ತು. ದೂರದ ಸಂಬಂಧದ ಬಡ ಹುಡುಗಿಯನ್ನು ಹಿಂದೆ ಮುಂದೆ ನೋಡದೆ ಸರಳವಾಗಿ ಮದುವೆಯಾದೆ. ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು.

 

ಬದುಕಿನ ನಿಜವಾದ ಅಗ್ನಿ ಪರೀಕ್ಷೆ ಪ್ರಾರಂಭವಾಗಿದ್ದು ಇಲ್ಲಿಯೇ. ಸಂಸಾರ ನಿಭಾಯಿಸಲು ಸಂಪೂರ್ಣ ವಿಫಲನಾದೆ. ಮನೆ ಬಾಡಿಗೆ ಊಟ ಕೊನೆಗೆ ಮಕ್ಕಳ ಹಾಲು ಮತ್ತು ಅವರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.‌ ಆ ಒತ್ತಡ ಹೆಚ್ಚಾಗಿ ಸಣ್ಣಗೆ ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡಕೊಳ್ಳತೊಡಗಿದೆ. ಹಣಕ್ಕಾಗಿ ಸ್ನೇಹಿತರ ಬಳಿ ಸಾಲ ಮಾಡಿದೆ. ಅದೂ ಸಾಲಾದಾದಾಗ ಸಂಬಂಧಿಕರ ಬಳಿ ಮೊದಲ ಬಾರಿಗೆ ಕೈಚಾಚಿದೆ. 

 

ಈ ಕಾರಣಕ್ಕಾಗಿ ಹೆಸರು ಕೆಟ್ಟಿತು. ನನ್ನ ಬಗ್ಗೆ ಇತರರ ಅಭಿಪ್ರಾಯ ಬದಲಾಯಿತು. ಸಾಲಗಾರರ ಕಾಟ ಜಾಸ್ತಿಯಾಯಿತು. ನೆಂಟರು ದೂರವಿಡತೊಡಗಿದರು. ಮನೆ ಬಿಟ್ಟು ತಲೆ ತಪ್ಪಿಸಿಕೊಂಡು ಓಡಾಡತೊಡಗಿದೆ......

 

ತುಂಬಾ ಒಳ್ಳೆಯವಳು ಮತ್ತು ಸೌಮ್ಯ ಸ್ವಭಾವದವಳಾಗಿದ್ದ ನನ್ನ ಪತ್ನಿ ನನ್ನ ಹುಚ್ಚುತನಕ್ಕೆ ರೋಸಿ ಹೋಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನನ್ನು ತ್ಯಜಿಸಿ ಮಕ್ಕಳ ಸಮೇತ ಅಮ್ಮನ ಮನೆ ಸೇರಿದಳು. ಬಹುತೇಕ ಬದುಕು ಪಾದಚಾರಿ ದಾರಿಯಲ್ಲಿ ತಂದು ನಿಲ್ಲಿಸಿತು.....

 

ಮೌಲ್ಯಗಳ ಹಿಂದೆ ಬಿದ್ದ ನಾನು ಕೊನೆಗೆ ಅಪಮೌಲ್ಯಗೊಂಡೆ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ನಾನಾಗಿರಲಿಲ್ಲ. ಕಾಫಿಯನ್ನೂ ಕುಡಿಯದ ನಾನು ರಾತ್ರಿಯ ನಿದ್ದೆಗಾಗಿ ಮದ್ಯಪಾನ ಮಾಡತೊಡಗಿದೆ. ಹಳೆಯ ಸ್ನೇಹಿತರ ಬಳಿ ಕಾಡಿ ಬೇಡಿ ಅದಕ್ಕಾಗಿ ಹಣ ಹೊಂದಿಸುತ್ತಿದ್ದೆ.

 

ಅದೃಷ್ಟವೋ ದುರಾದೃಷ್ಟವೋ ಒಮ್ಮೆ ಒಂದು ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದಾಗ ದುಃಖ ಉಕ್ಕಿಬಂದು ಅಳುತ್ತಿದ್ದೆ. ಅದನ್ನು ಗಮನಿಸಿದ ಬಾರ್ ಮ್ಯಾನೇಜರ್ ನನ್ನನ್ನು ಸಮಾಧಾನ ಮಾಡಿ ವಿಷಯ ಕೇಳಿದ. ನಾನು ಕುಡಿದ ಮತ್ತಿನಲ್ಲಿ ಸಂಪೂರ್ಣ ವಿಷಯ ಹೇಳಿದೆ. ಆತ ನಾಳೆ ಬೆಳಗ್ಗೆ ಬಂದು ಭೇಟಿಮಾಡಲು ಹೇಳಿದ.

 

ಹೆಚ್ಚು ಕಾಯಿಸುವುದಿಲ್ಲ. ಬೇಗ ಬೇಗ ಹೇಳುತ್ತೇನೆ. .....

 

ಬೆಳಗ್ಗೆ ಆತನನ್ನು ಬೇಟಿ ಮಾಡಿದಾಗ ನನ್ನ ಅದೃಷ್ಟದ ಬಾಗಿಲು ತೆರೆಯಿತು. ನಾನು ಜೀವನದಲ್ಲಿ ಒಮ್ಮೆಯೂ ನೋಡದ ೫೦ ಲಕ್ಷದ ಕೆಲಸವದು. ಒಪ್ಪಿಕೊಂಡರೆ ತಕ್ಷಣವೇ ೧೦ ಲಕ್ಷ ಹಣ ಕೊಡಲು ಸಿದ್ದನಾದ. ನನ್ನ ಪ್ರಾಮಾಣಿಕತೆ ಆತನಿಗೆ ಮನವರಿಕೆಯಾಗಿತ್ತು.

 

೫ ನಿಮಿಷ ಯೋಚಿಸಿ ಕೆಲಸ ಒಪ್ಪಿಕೊಂಡೆ. ೧೦೦೦ ರೂಪಾಯಿ ತಕ್ಷಣ ಖರ್ಚಿಗೆ ನೀಡಿದ ಆತ ಮೂರು ದಿನ ಬಿಟ್ಟು ಬರಲು ಹೇಳಿದ. ನನ್ನ ಬಳಿ ಮೊಬೈಲ್ ಇರಲಿಲ್ಲ. ಆತನೂ ನಂಬರ್ ಕೊಡಲಿಲ್ಲ.

 

ಮೂರನೆಯದಿನ ಆತ ಬಾರಿನ ಹತ್ತಿರದ ಪಾರ್ಕಿಗೆ ಕರೆದುಕೊಂಡು ಹೋಗಿ ೫೦೦ ರೂಪಾಯಿಗಳ ಗರಿಗರಿ ನೋಟಿನ ೧೦ ಲಕ್ಷದ ಸೂಟ್ ಕೇಸ್ ನೀಡಿ ಮಾಡ ಬೇಕಾದ ಕೆಲಸದ ಸಂಪೂರ್ಣ ಮಾಹಿತಿ ನೀಡಿ ಶುಭ ಹಾರೈಸಿ ಕೆಲಸ ಮುಗಿದ ನಂತರ ಬೇಟಿಯಾಗಬೇಕಾದ ಸ್ಥಳ ಮತ್ತು ಉಳಿದ ಹಣ ಸಂಗ್ರಹಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿದ.

 

ಹಣ ಪಡೆದ ತಕ್ಷಣ ನಾನು ನೇರವಾಗಿ ಒಂದು ಡೈರಿ ಕೊಂಡು ಅದರಲ್ಲಿ ಕೆಲವು ವಿಷಯಗಳನ್ನು ಬರೆದು

 " ನಾನು ಮುಂಬಯಿಗೆ ಕೆಲಸಕ್ಕೆ ಹೋಗುತ್ತಿರುವುದಾಗಿಯೂ ಅಲ್ಲಿ ಒಳ್ಳೆಯ ಕೆಲಸ ಸಿಕ್ಕಿದ್ದು ಅದರ ಒಡೆಯರು ಮುಂಗಡವಾಗಿ ೯ ಲಕ್ಷ ೫೦ ಸಾವಿರ ಕೊಟ್ಟಿದ್ದು ಅದನ್ನು ನೀನು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸುವುದು ನಾನು ೫/೬ ವರ್ಷದ ನಂತರ ವಾಪಸ್ಸು ಬರುತ್ತೇನೆ. ಮುಂಬಯಿಗೆ ಹೋದ ಮೇಲೆ ಹೊಸ ಮೊಬೈಲ್ ಖರೀದಿಸಿ ನಂಬರ್ ಕೊಡುವುದಾಗಿ ಬರೆದು" ಅದನ್ನು ಹೆಂಡತಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

ಮನಸ್ಸಿಗೆ ಒಂದಷ್ಟು ಸಮಾಧಾನವಾಯಿತು.

 

ಈಗ ಕೊಟ್ಟ ಮಾತಿನಂತೆ ನಾನು ಕೆಲಸ ಮಾಡಲು ಸಿದ್ದನಾದೆ. ಅದು.......

 

ಕೊಲೆ.......

 

ಹೌದು, ಸುಫಾರಿ ತೆಗೆದುಕೊಂಡಾಗಿತ್ತು. ಆಸ್ಪತ್ರೆಯ ಒಬ್ಬ ನರ್ಸ್ ( ದಾದಿ ) ಯನ್ನು ಕೊಲ್ಲಬೇಕಿತ್ತು...... 

 

ನನಗೆ ಮ್ಯಾನೇಜರ್ ಹೇಳಿದ ಮಾಹಿತಿ, ದುಬೈನ ಪ್ರಖ್ಯಾತ ಮತ್ತು ಶ್ರೀಮಂತ ‌ಡಾಕ್ಟರ್ ಬಳಿ ಸಹಾಯಕಿಯಾಗಿದ್ದ ಈಕೆ ಆತನಿಗೆ ಪ್ರೀತಿಯ ನಾಟಕ ಮಾಡಿ ಅವನ ಬೆನ್ನಗೆ ಚೂರಿ ಹಾಕಿ ಅಪಾರ ಹಣದೊಂದಿಗೆ ಇಲ್ಲಿಗೆ ಬಂದು ಬೇರೆಯವರ ಜೊತೆ ಸಂಸಾರ ಮಾಡುತ್ತಿದ್ದಳು. ಅದನ್ನು ‌ಸಹಿಸದ ಆತ ಇಲ್ಲಿನ ಪರಿಚಿತ ಮ್ಯಾನೇಜರ್ ಮುಖಾಂತರ ಹಣ ಎಷ್ಟಾದರೂ ಚಿಂತೆ ಇಲ್ಲ. ಆಕೆಯನ್ನು ಮುಗಿಸಲು ಹೇಳಿದ್ದನು. ಅದಕ್ಕೆ ಸರಿಯಾಗಿ ನಾನು ಸಿಕ್ಕಿ ಅದನ್ನು ಒಪ್ಪಿಕೊಂಡಿದ್ದೆ. 

 

ಮುಂದಿನ ಅಪರಾಧ ಕೃತ್ಯವನ್ನು ವಿವರವಾಗಿ ಹೇಳುವುದು ಸರಿಯಲ್ಲ. ಕೆಲವೇ ಪದಗಳಲ್ಲಿ ಹೇಳಿ ಮುಗಿಸುವೆ. ಆಕೆಯ ಎಲ್ಲಾ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಕೆ ಒಂಟಿಯಾಗಿರುವಾಗ ಕೊರಿಯರ್ ಕೊಡುವ ನೆಪದಲ್ಲಿ ಮನೆ ಪ್ರವೇಶಿಸಿ ಆಕೆಯನ್ನು ಹತ್ಯೆ ಮಾಡಿದೆ. ಆಕೆಯ ಬಳಿ ಇದ್ದ ಮತ್ತು ಮೇಲೆ ಕಾಣಿಸಿದ ಒಂದಷ್ಟು ಹಣ ಒಡವೆ ದೋಚಿ ಅಲ್ಲಿಂದ ಪರಾರಿಯಾದೆ.

 

ನೇರ ಒಂದು ಲಾಡ್ಜ್ ಮಾಡಿ ರಾತ್ರಿ ಅಲ್ಲಿ ಮಲಗಿದೆ. ಉಳಿದ ೪೦ ಲಕ್ಷ ಹಣ ಪಡೆದು ಏನು ಮಾಡುವುದು ಯೋಚಿಸತೊಡಗಿದೆ. ಆದರೆ ನೆನಪುಗಳು ನನ್ನನ್ನು ಕಾಡತೊಡಗಿದವು. ಆಕೆಯ ಹತ್ಯೆಯ ದೃಶ್ಯಗಳೇ ಕಣ್ಣ ಮುಂದೆ ಕುಣಿಯತೊಡಗಿತು. ಆದರ್ಶಗಳ ಬೆನ್ನು ಹತ್ತಿದ ನಾನು ಕೊನೆಗೆ ಕೊಲೆಗಾರನಾದೆ. ಯಾರಿಗಾಗಿ. ಹೆಂಡತಿ ಮಕ್ಕಳಿಗಾಗಿ. ಈಗ ಅವರೂ ನನ್ನೊಂದಿಗಿಲ್ಲ ಮತ್ತು ಯಾರೂ ಈ ಕ್ಷಣ ನನ್ನ ಜೊತೆ ಇರಲಿಲ್ಲ.

 

ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿತು. ಬದುಕು ನಿರರ್ಥಕವೆನಿಸಿತು. ರಾತ್ರಿಯೆಲ್ಲಾ ಯೋಚಿಸಿದೆ. ಬೆಳಗ್ಗೆ ನೇರವಾಗಿ ಕದ್ದ ವಸ್ತುಗಳೊಂದಿಗೆ ಹತ್ತಿರದ ಪೋಲೀಸ್ ಸ್ಟೇಷನ್ ಗೆ ಹೋಗಿ ಶರಣಾದೆ. 

 

ಸಾಲದ ಹಣಕ್ಕಾಗಿ ಕೊಲೆ ಮಾಡಿದೆ. ಆದರೆ ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ದಯವಿಟ್ಟು ನನ್ನನ್ನು ಬಂಧಿಸಿ ಶಿಕ್ಷೆ ಕೊಡಿ ಎಂದು ವಿನಂತಿಸಿದೆ. ಸುಫಾರಿಗಾಗಿ ಕೊಲೆ ಮತ್ತು ಮ್ಯಾನೇಜರ್ ಹೆಸರನ್ನು ಎಲ್ಲಿಯೂ ಹೇಳಲಿಲ್ಲ.

 

ಪೋಲೀಸರು ಸಹ ನನ್ನ ದೃಡವಾದ ಮತ್ತು ಬುದ್ದಿವಂತನಂತ ಆತ್ಮವಿಶ್ವಾಸದ ಮಾತುಗಳನ್ನು ನಂಬಿ ಹೆಚ್ಚಿನ ಹಿಂಸೆ ಮಾಡದೆ ನನ್ನ ಹೇಳಿಕೆಯ ಆಧಾರದ ಮೇಲೆ ತನಿಖೆ ಮಾಡಿ ತಪ್ಪೊಪ್ಪಿಗೆಯನ್ನೇ ಚಾರ್ಜ್ ಷೀಟ್ ಆಗಿ ಸಲ್ಲಿಸಿದರು. ನಾನು ಸಹ ವಕೀಲರನ್ನು ನೇಮಿಸಿಕೊಳ್ಳದೆ ಯಾವ ಪ್ರತಿವಾದವನ್ನು ಮಾಡದೆ ಪೋಲೀಸರ ಮುಂದೆ ನೀಡಿದ ಹೇಳಿಕೆ ಸತ್ಯವೆಂದು ಹೇಳಿದೆ. ಅದರ ಆಧಾರದ ಮೇಲೆ ಯಾವುದೇ ದೀರ್ಘ ವಿಚಾರಣೆ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

 

ನಾನು ಸಂತೋಷದಿಂದಲೇ ಒಪ್ಪಿಕೊಂಡೆ. ಇದು ನಡೆದು ಸುಮಾರು ೪ ವರ್ಷಗಳ ಮೇಲಾಯಿತು. ಬಹುತೇಕ ಮೌನವೇ ನನ್ನ ಧ್ಯಾನವಾಗಿದೆ. ಜೈಲಿನ ಗೋಡೆಗಳೇ ನನ್ನ ಸ್ನೇಹಿತರು. ಶಿಕ್ಷೆಗೆ ಒಳಗಾಗಿರುವ ಖೈದಿಯಾಗಿರುವುದರಿಂದ ನನಗೆ ಸೆಲ್ ನಲ್ಲಿ ಒಂಟಿಯಾಗಿರುವ ಸ್ವಾತಂತ್ರ್ಯವೂ ಇದೆ. ಜೈಲಿನ ನಿಯಮಗಳಂತೆ ಗಾರ್ಡನ್ ನೋಡಿಕೊಳ್ಳುವ ಕೆಲಸ ನೀಡಲಾಗಿದೆ. ಗಂಟೆ ದಿನ ವಾರ ತಿಂಗಳುಗಳ ಸಮಯದ ಪರಿವೆ ಇಲ್ಲದೆ ದಿನ ದೂಡುತ್ತಿದ್ದೇನೆ.

 

ನನ್ನವರು ಯಾರೂ ಇಲ್ಲ. ಆದರೆ ಒಬ್ಬ ವ್ಯಕ್ತಿ ಮಾತ್ರ ನನ್ನನ್ನು ಬೇಟಿಯಾಗಲು ಪ್ರಯತ್ನಿಸುತ್ತಿದ್ದಾನೆ. ನನಗೆ ಜೈಲು ಶಿಕ್ಷೆಯಾದ ಪ್ರಾರಂಭದಲ್ಲೂ ಒಮ್ಮೆ ಬಂದಿದ್ದ. ಅವನ ಹೆಸರು ಜೈಲು ವಾರ್ಡನ್ ನಿಂದ ಕೇಳಿ  ಹಾಗೇ ವಾಪಸ್ಸು ಕಳಿಸಿದ್ದೆ ಮತ್ತು ಈಗಲೂ ಸಹ.

 

ಆತ ಬಾರಿನ ಮ್ಯಾನೇಜರ್. 

ಆತ ವಹಿಸಿದ ಕೆಲಸವನ್ನು ಮಾಡಿ, ಆತನಿಂದ ಉಳಿದ ೪೦ ಲಕ್ಷವನ್ನು ಪಡೆಯದೆ, ಆತನ ಹೆಸರನ್ನು ಬಾಯಿ ಬಿಡದೆ ನಾನು ಸಲ್ಲಿಸಿದ ಸಹಾಯಕ್ಕಾಗಿ ಆತ ನನಗೆ ನೆರವು ನೀಡಲು ಸಿದ್ದನಿದ್ದ.ಅಪರಾಧಿಯಲ್ಲೂ ನಿಯತ್ತು.......

 

ಆದರೆ ಅದನ್ನು ಸ್ವೀಕರಿಸಲು ನಾನು ಸಿದ್ದನಿಲ್ಲ.

 

ಆದರ್ಶಗಳ ಬೆನ್ನೇರಿ, ಅಪರಾಧಿಯಾಗಿ, ಅನಾಥನಾಗಿ, ಕೊನೆಗೆ ಎಲ್ಲಾ ಒತ್ತಡಗಳಿಂದ ಮುಕ್ತನಾದ ನಾನೀಗ ಸರ್ವತಂತ್ರ ಸ್ವತಂತ್ರ. ಬದುಕಿನ ಅನಂತದೆಡೆಗೆ ಪಯಣಿಸುತ್ತಾ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಸುಧಾರಣೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068.......

Enjoyed this article? Stay informed by joining our newsletter!

Comments

You must be logged in to post a comment.

About Author