ಪ್ರೇಮಿಗಳ ದಿನ - Valentines day...

ಫೆಬ್ರವರಿ 14 - valentines day.....

 

ಪ್ರೇಮಿಗಳ ದಿನ.......

 

ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು,

ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು.....

 

ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ ಒಟ್ಟಿಗೆ ನಡೆಯುವ ಸಾಧ್ಯತೆಯ ಒಂದು ಅಂತರಾಳದ ಪತ್ರ.........

 

ಪ್ರೀತಿಯ ಆಳ, ತಂದೆ ತಾಯಿಗಳ ಸೆಳೆತದ ಆಳ,

ಮಕ್ಕಳ ಮೇಲಿನ ಮೋಹದ ಆಳ, ಬದುಕಿನ ಕ್ಷಣಿಕತೆಯ ಅನುಭವ, ಮನಸ್ಸುಗಳ ತೊಳಲಾಟ ಎಲ್ಲವೂ ಇಲ್ಲಿ ಪ್ರಸ್ತುತವಾಗಿ.......

 

ಪ್ರೇಮಿಗಳು ಮನೆ ತೊರೆದು ಕಾಲಿಡುವ ಮುನ್ನ ಮತ್ತು ಪೋಷಕರು ಪ್ರೇಮಿಗಳಿಗೆ ಅಡ್ಡಗಾಲಾಗುವ ಮುನ್ನ ಒಂದು ಆತ್ಮಾವಲೋಕನಕ್ಕಾಗಿ...........

 

ಅಪ್ಪಾ,,,,,,,,,,,,,,

 

ಯಾಕಪ್ಪಾ, 24 ವರ್ಷಗಳು ಕಣ್ಣಲ್ಲಿ ಕಣ್ಣಿಟ್ಟು ನಿನಗಿಂತ ನನ್ನನ್ನೇ ಹುಚ್ಚನಂತೆ ಪ್ರೀತಿಸಿ ನಿನ್ನ ಬದುಕಿನ 24 ವರ್ಷಗಳು, ಅಮ್ಮನ ಬದುಕಿನ 25 ವರ್ಷಗಳು ನನ್ನ ಬೇಕು ಬೇಡಗಳ ಸುತ್ತಲೇ ತಿರುಗಿಸುತ್ತಾ.....

 

 ನಿಮ್ಮ ಪ್ರೀತಿಯ ಹೊಳೆಯಲ್ಲಿ ತೇಲಿಸಿ ಇದೀಗ ನಿಮ್ಮ ಒಬ್ಬಳೇ ಮಗಳ ಪ್ರೀತಿಯ ಆಸೆಗೆ ನೀವೇ ಶತ್ರುವಾಗಿ, ನಿಮ್ಮ ಪ್ರೀತಿ ನಿಜ ಪ್ರೀತಿಯಲ್ಲ, ಅದು ನಿಮ್ಮ ಹಣ ಅಧಿಕಾರ ಅಂತಸ್ತು ಗೌರವ ಮರ್ಯಾದೆ ನಿಯಂತ್ರಣ ನಿರೀಕ್ಷೆ ಸ್ವಾರ್ಥಲೇಪಿತ ಪ್ರೀತಿಯ ಮುಖವಾಡ ಎಂದು ಬಯಲು ಮಾಡಿದಿರಿ.....

 

ಅಪ್ಪಾ,...

 

ನಾನೇನು ತಪ್ಪು ಮಾಡಿದ್ದೇನೆ. 

ಸತ್ಯ ಹೇಳುತ್ತೇನೆ ಕೇಳಿ....

ನನ್ನ ಕಾಲೇಜಿನ ಜೊತೆಗಾರ - ದೀರ್ಘಕಾಲದ ಆತ್ಮೀಯ ಸ್ನೇಹಿತ ಒಂದು ದಿನ ನನ್ನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದ. 

 

ಅಪ್ಪಾ ಅಲ್ಲಿಯವರೆಗೂ ಸಹಜವಾಗಿದ್ದ ನನ್ನ ಭಾವನೆಗಳು ಅಲ್ಲಿಂದ ನನ್ನ ನಿಯಂತ್ರಣ ಕಳೆದುಕೊಂಡವು. ಆತನಿಗೆ ಒಂದು ವಾರ ಸಮಯ ಕೇಳಿದೆ. 

ನಾನೇನು ಲಜ್ಜೆಗೆಟ್ಟವಳಲ್ಲ ಅಪ್ಪ. ನಿಮ್ಮ ಪ್ರೀತಿಯ ಮಗಳು. ನನಗೂ ಜವಾಬ್ದಾರಿ ಇದೆ. ಆ ಒಂದು ವಾರ ಉಂಟಾದ ತಳಮಳ ಹೇಗೆ ಹೇಳಲಿ. ಊಟ ತಿಂಡಿ ನಿದ್ದೆ ಎಲ್ಲವೂ ನನ್ನಿಂದ ದೂರವಾದವು. ಜೀವನದಲ್ಲಿ ಮೊದಲ ಬಾರಿಗೆ ಆ ಅನುಭವ ನನಗಾಯಿತು.

 

ಅಪ್ಪಾ,

ನಿಜ ಹೇಳಲೇ, ಆ ಕ್ಷಣದಿಂದ ನನ್ನ ಮನಸ್ಸಿನಲ್ಲಿ ನನ್ನ ಜೊತೆಗಾರನಿಗಿಂತ ನೀವೇ ಹೆಚ್ಚು ಆಕ್ರಮಿಸಿದಿರಿ. ನಿಮಗೆ ಈ ವಿಷಯ ಹೇಗೆ ಹೇಳಬೇಕು ಎಂಬುದೇ ನನ್ನ ಚಡಪಡಿಕೆಯಾಗಿತ್ತು. ಅಮ್ಮ ಈ ವಿಷಯ ಒಪ್ಪುವುದಿಲ್ಲ ಎಂದು ನನ್ನ ಅನುಭವದ ಒಳ ಮನಸ್ಸು ಹೇಳಿತು. ಏಕೆಂದರೆ ನನ್ನ ಮದುವೆಯ ಶ್ರೀಮಂತಿಕೆ ಪ್ರದರ್ಶನ ಮಾತುಗಳೇ ಅವರಿಂದ ಸದಾ ಬರುತ್ತಿತ್ತು. ಅಳಿಯನ ಅಂತಸ್ತು ಅವರಿಗೆ ಮುಖ್ಯವಾಗಿತ್ತು. 

 

ಆದರೆ,

ಅಪ್ಪಾ,

ನೀವೂ ಸಹ ನನ್ನ ಪ್ರೀತಿಯ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳವಷ್ಟು ಅಂತರ ನನಗೆ ನೀಡಿರಲಿಲ್ಲ. ಆದರೂ ನನ್ನ ಪ್ರೀತಿಯಲ್ಲಿ ನೀವೇ ಮುಖ್ಯವಾದಿರಿ.

 

ಒಂದು ದಿನ ಭಯಪಡುತ್ತಾ ನಿಮ್ಮೊಂದಿಗೆ ನನ್ನ ಪ್ರೀತಿಯ ವಿಷಯ ಹೇಳಿದೆ.....

ಅಬ್ಬಾ, ಮೊದಲ ಬಾರಿಗೆ ನಿಮ್ಮ ಆ ರೌದ್ರಾವತಾರ ನೋಡಿ ನನಗೆ ಸಾವಿನ ಭಯ ಕಾಡಿತು.

 

ಅಪ್ಪಾ, 

ಅಷ್ಟೊಂದು ಅನುಭವದ ವಿದ್ಯಾವಂತರಾದ ನೀವು ಎಳೆಯ ಮನಸ್ಸಿನ ಪ್ರೀತಿಯ ಆಳ ಅರಿಯುವ ಮೊದಲ ಹೆಜ್ಜೆಯಲ್ಲೇ ವಿಫಲರಾದಿರಿ.

ಅಲ್ಲಿಂದಲೇ ನಮ್ಮಿಬ್ಬರ ನಡುವಿನ ಅಂತರ ಹೆಚ್ಚಾಯಿತು......

 

ಆದರೂ ಅಪ್ಪ,

ನಿಮ್ಮ ಮೇಲಿನ ಗೌರವದಿಂದ ನಾನು ನನ್ನ ಜೊತೆಗಾರನಿಗೆ ಆತನ ಪ್ರೀತಿಯನ್ನು ತಿರಸ್ಕರಿಸಿದೆ. ಇದು ಸಾಧ್ಯವಿಲ್ಲ ಎಂದು ಹೇಳಿದೆ. ಇದು ನಿಜ ಅಪ್ಪ....

 

ವಿಪರ್ಯಾಸ ಏನು ಗೊತ್ತಾ ಅಪ್ಪಾ,.....

ಅಲ್ಲಿಂದಲೇ ನೀವು ನನ್ನ ಮೇಲೆ ನಿಯಂತ್ರಣ ಸಾಧಿಸಿ ನನ್ನೊಡನೆ ಅಸಹನೆ ಪ್ರದರ್ಶಿಸಲು ಪ್ರಾರಂಭಿಸಿದಿರಿ. ಅಮ್ಮನಂತೂ ನನ್ನ ಮೇಲೆ ಮೊದಲ ಬಾರಿಗೆ ಕೈ ಮಾಡಿದರು. ನನ್ನ ಎಳೆಯ ಮನಸ್ಸಿಗೆ ಅದು ಬಹುದೊಡ್ಡ ಹಿಂಸೆಯಾಯಿತು.

ಅದೇ ಸಮಯಕ್ಕೆ ನನಗೆ ನನ್ನ ಯಾತನೆ ಹೇಳಿಕೊಳ್ಳಲು ಯಾರಾದರೂ ಒಬ್ಬರ ಅವಶ್ಯಕತೆ ಮತ್ತು ಅನಿವಾರ್ಯತೆ ಉಂಟಾಯಿತು..

 

ಒಂದು ದಿನ ನನ್ನಿಂದ ತಿರಸ್ಕರಿಸಲ್ಪಟ್ಟಿದ್ದ ಅದೇ ಜೊತೆಗಾರ ನನ್ನ ಸ್ನೇಹಿತೆಯಿಂದ ಬದಲಾಗಿದ್ದ ನನ್ನ ಮೊಬೈಲ್ ನಂಬರ್ ಪಡೆದು ಆತನಿಗೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಸಿಕ್ಕಿರುವ ವಿಷಯ ತಿಳಿಸಿ ಕೊನೆಗೆ ಒಂದು ಮಾತು ಹೇಳಿದ,

 

 " ಮುದ್ದು ನಾನು ಈಗಲೂ ನಿನ್ನನ್ನು ಅಷ್ಟೇ ಪ್ರೀತಿಸುತ್ತೇನೆ. ಆದರೆ ಒತ್ತಾಯ ಮಾಡುವುದಿಲ್ಲ. ನೀನು ಮದುವೆಯಾಗುವವರೆಗೂ ನಾನು ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. ನಿನ್ನ ಮದುವೆ ಆದ ಕ್ಷಣದಿಂದ ನಿನ್ನಿಂದ ದೂರಾಗುತ್ತೇನೆ. ಇದು ಸ್ಪಷ್ಟ " ಎಂದು ಹೇಳಿದ.

 

ಅಪ್ಪಾ,

ಅತೃಪ್ತಿಯಿಂದ ಕುದಿಯುತ್ತಿದ್ದ ನನ್ನ ಮನಸ್ಸಿಗೆ ಆ ಮಾತುಗಳೇ ಸಂಜೀವಿನಿಯಾಯಿತು...........

ಅಲ್ಲಿಂದ ಇಲ್ಲಿಯವರೆಗೂ ನಡೆದದ್ದು ಊಹಿಸಲು ಅಸಾಧ್ಯ....

 

ನನ್ನ ಪ್ರೀತಿಯ ಅದೇ ಪಪ್ಪಾ ಇಂದು ನನ್ನನ್ನು ಕೊಲ್ಲಲು ಹವಣಿಸುತ್ತಿದ್ದಾರೆ. ನನ್ನನ್ನು ದ್ವೇಷಿಸುತ್ತಿದ್ದಾರೆ. ನಾನು ನನ್ನ ಜೊತೆಗಾರನೊಂದಿಗೆ ಮನೆಬಿಟ್ಟು ಹೇಳದೆ ಕೇಳದೇ ಬಂದದ್ದು ಅವರ ವಂಶಕ್ಕೆ ಕಳಂಕವಂತೆ. 

 

ಅಪ್ಪಾ, 

ನಿಜ ಹೇಳಿ, ನಾನು ಸತ್ಯ ಹೇಳಿದ್ದರೆ ನೀವು ಒಪ್ಪುತ್ತಿದ್ದಿರೆ. ಈ ಕ್ಷಣದ ಒತ್ತಡದಿಂದ ಹಾಗೆ ಹೇಳುತ್ತಿದ್ದೀರಿ. ಆದರೆ ಪ್ರೀತಿ ವ್ಯಕ್ತಪಡಿಸುವ ಮಾನಸಿಕ ಅವಕಾಶವನ್ನೇ ನೀವು ಕೊಡಲಿಲ್ಲ. ನಿಮ್ಮ ಪ್ರೀತಿಯಿಂದಲೇ ನನ್ನ ಪ್ರೀತಿಯನ್ನು ಕಟ್ಟಿ ಹಾಕಿದಿರಿ. ನಿಮ್ಮ ಪ್ರೀತಿ ನನ್ನಿಂದ ಬಹಳಷ್ಟು ನಿರೀಕ್ಷೆ ಮಾಡಿತು.

 

ಅಪ್ಪಾ,

ನಾನು ಈಗಲೂ ಹೇಳುತ್ತೇನೆ. ನಾನು ನನ್ನ ಜೊತೆಗಾರನೊಂದಿಗೆ ಮದುವೆಯಾಗಿದ್ದೇನೆಯೇ ಹೊರತು ಮಾರಾಟವಾಗಿಲ್ಲ.  ಒಂದು ವೇಳೆ ಆತ ನಿಷ್ಕಲ್ಮಶ ಪ್ರೀತಿ ಕೊಡಲು ವಿಫಲವಾದರೆ ಆತನನ್ನೂ ತಿರಸ್ಕರಿಸುತ್ತೇನೆ. ಆಗ ನಿನ್ನ ಬಳಿ ಬರುವೆನೆಂದು ನಿರೀಕ್ಷಿಸಬೇಡ. ಎಷ್ಟೇ ಕಷ್ಟ ಬಂದರೂ ನನ್ನ ಬದುಕನ್ನು ನಾನೇ ನಿರ್ವಹಿಸುತ್ತೇನೆ ಸಾವು ಬಂದರೂ ಸಹ.

 

 ಅಪ್ಪಾ,

ನಾನು ನನ್ನ ಜೊತೆಗಾರರನ್ನು ಪ್ರೀತಿಸಿದೆ ಎಂದರೆ ಮನೆಯವರನ್ನು ದ್ವೇಷಸುತ್ತೇನೆ ಎಂದು ಅರ್ಥವಲ್ಲ.

ನಾನು ಮಾತ್ರ ಈಗಲೂ ನಿನ್ನನ್ನು ಅಮ್ಮನನ್ನು ಅಷ್ಟೇ ಪ್ರೀತಿಸುತ್ತೇನೆ. ನಿಮಗೆ ಯಾವುದೇ ಸಂಧರ್ಭದಲ್ಲಿ ಯಾವುದೇ ತೊಂದರೆಯಾದರೂ ನಿಮ್ಮ ಸೇವೆಗೆ ನಾನು ಸದಾ ಸಿದ್ದ ಯಾವುದೇ ನಿರೀಕ್ಷೆಯಿಲ್ಲದೆ. ಏಕೆಂದರೆ ನೀವು ನನಗೆ ಜನ್ಮ ನೀಡಿದ ತಂದೆ ತಾಯಿ. ನನ್ನ ದೇಹದಲ್ಲಿ ಹರಿಯುತ್ತಿರುವುದು ನಿಮ್ಮದೇ ರಕ್ತ.

 

ಅಪ್ಪಾ,

ಕೊನೆಯದಾಗಿ,.....

ನನಗೆ ಗೊತ್ತು ನೀವು ಈ ಪತ್ರ ಮೊದಲಿಗೆ ಓದುವುದಿಲ್ಲ. ಆದರೆ ಆಮೇಲೆ ರಾತ್ರಿ ಮಲಗುವಾಗ ಅಮ್ಮನಿಗೆ ಕಾಣದಂತೆ ಕದ್ದು ಮುಚ್ಚಿ ಓದುವಿರಿ. ಓದುತ್ತಿದ್ದಂತೆ ನಿಮ್ಮ ಕಣ್ಣಿನಿಂದ ಹರಿಯುವ ನೀರನ್ನು ಯಾರೂ ತಡೆಯಲಾರರು.

 

ಅಪ್ಪಾ,

ನನಗೆ ಈ ಕ್ಷಣದಲ್ಲಿ ನನ್ನ ಗಂಡನ ತೋಳ್ತೆಕ್ಕೆಗಿಂತ ನಿನ್ನ ಅಪ್ಪುಗೆ ಬೇಕಿನಿಸುತ್ತಿದೆ.

ಅಮ್ಮನ ಮಡಿಲು ಸ್ವರ್ಗದಂತೆ ಕಾಣುತ್ತಿದೆ.

 

ಪಪ್ಪಾ,,

ನಾನು ನಿನ್ನ ಕ್ಷಮೆ ಕೇಳುವುದಿಲ್ಲ.ಏಕೆಂದರೆ ನಾನು ತಪ್ಪು ಮಾಡಿಲ್ಲ. ಪ್ರೀತಿಸುವುದು ಜೀವಿಯ ಸಹಜ ಗುಣ.

ಜಾತಿ ಅಂತಸ್ತು ಅಧಿಕಾರ ಮಾಧ್ಯಮ ಅವಮಾನ ಎಲ್ಲಾ ಭ್ರಮೆ ಪಪ್ಪಾ.

 

 ನನಗಿನ್ನೂ 24 ಪಪ್ಪಾ. ನಿನಗೆ 55.

ಪಪ್ಪಾ ಪಪ್ಪಾ ಈ ಕ್ಷಣ ನೀನು ಈ ಪತ್ರ ಓದಿ ನನಗೆ ಕಾಲ್ ಮಾಡಿದರೆ ನಾನು ಸಾವಿನ ಭಯವನ್ನೂ ಇನ್ನೆಂದು ಅನುಭವಿಸುವುದಿಲ್ಲ. ಸಾವನ್ನು ಗೆದ್ದಷ್ಟು ಸಂಭ್ರಮಿಸುತ್ತೇನೆ.....

 

ನನ್ನ ಪಪ್ಪ ಎಂದೆಂದಿಗೂ ಪಪ್ಪನೇ................

ಬೇಗ ಕಾಲ್ ಮಾಡಿ ಪಪ್ಪಾ...

ನನ್ನ ಗಂಡ ಕೂಡ ನನ್ನ ಸಂಕಟ ನೋಡಿ ನನ್ನೊಂದಿಗೆ ಅಳುತ್ತಿದ್ದಾನೆ.........

 

ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ..

ನನ್ನ ಅಪ್ಪ ಅಮನನ್ನೂ.....

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068

Enjoyed this article? Stay informed by joining our newsletter!

Comments

You must be logged in to post a comment.

About Author