ನಾನ್ಯಾರು?

ನಾನ್ಯಾರು?

 

ಮಾನವ ಸಂಕುಲದ ಉಸಿರು,

ತನ್ನೆಲ್ಲವನ್ನೂ ಧಾರೆಯೆರೆದ ಸಂಗಾತಿ;

ಎಲ್ಲರನ್ನೂ ಸಮನಾಗಿ ಪೊರೆದು,

ಸಕಲ ಜೀವರಾಶಿಯ ಸಂತತಿ.

 

ಮರೀಚಿಕೆಯ ಬೆನ್ನೇರಿ ಹೋಗುವ,

ಮಾನವನ ಮುಂದಿದೆ ಅವನತಿ;

ಎಚ್ಚರಿಕೆ ಬೇಗನೆ ತೋರಬೇಕಿದೆ,

ತನ್ನವರ ಒಳಿತಿಗಾಗಿ ಪ್ರಗತಿ.

 

ಸ್ವಾರ್ಥದ ನೆಲೆಯ ಬಿಟ್ಟು,

ಬದುಕಬೇಕು ಅದೇ ನಮ್ಮ ಸಂಸ್ಕೃತಿ;

ವಿಚಾರಧಾರೆಗಳ ಮನನ ಮಾಡಿ,

ಬಾಳಬೇಕು ಆಗ ಸಿಗುವುದು ಸದ್ಗತಿ.

 

ವಿನಾಶಕ್ಕೆ ಮುನಿದು ನಿಂತರೆ,

ತಡೆಯಲಾರದು ನಮ್ಮೆಲ್ಲರ ದುರ್ಗತಿ;

ಜೀವಿಸೋಣ ಇನ್ನುಮುಂದೆ ಪೂರಕವಾಗಿ,

ಪರಸ್ಪರ ಸಹಬಾಳ್ವೆಯಿಂದ ದೊರೆಯುವುದು ಶಾಂತಿ.

 

ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ,

ಎಲ್ಲರ ನೆಮ್ಮದಿಯ ಸಂಕ್ರಾಂತಿ;

ತೋರಬೇಡ ನಿನ್ನಯ ಬೇಡಿಕೆಗಳ,

ದುರಾಸೆಯ ಮನಸ್ಸಿನ ವಿಕೃತಿ.

 

ಪ್ರತಿಬಾರಿ ಬಾಳಬೇಕು,

ಮನುಷ್ಯ ಅಳವಡಿಸಿಕೊಂಡು ನೀತಿ;

ಸಕಲವೂ ಒಳ್ಳೆಯದಾಗಿ ನಾವು,

ಆಗುವೆವು ಬೇರೆಯವರ ಕಾಂತಿ.

 

ಸಾಧಕ-ಭಾದಕಗಳ ಅರಿವು,

ಮೂಡಿಸಿ ಪ್ರಹರಿಸಿ ಜಾಗೃತಿ;

ಮನಸ್ಸಿನ ಒಳ್ಳೆಯ ಮಾತನ್ನು ಕೇಳಿ,

ಉಂಟಾಗುವುದು ನಿಮಗೆ ಸುಕೃತಿ.

 

ತೊರೆದು ಬಾಳಿದರೆ,

ನಮಗೆ ನಾವೇ ಯತಿ;

ಇಲ್ಲವಾದಲ್ಲಿ ಯಾವಾಗಲೂ, ನರಳಬೇಕು ಅಸ್ವಸ್ಥನ ರೀತಿ.

 

ಉತ್ತಮ ಬಾಳಿನ ಏಳಿಗೆಗೆ,

ನಮಗೆ ಬೇಕು ನಿಸ್ವಾರ್ಥ ಮತಿ;

ಇಲ್ಲವಾದಲ್ಲಿ ನಮ್ಮ ಬದುಕಿಗೆ,

ನಾವೇ ಸಂಕಟದ ಭೀತಿ.

 

ಎಲ್ಲರಿಗೂ ನೆಮ್ಮದಿಯ,

ಬದುಕ ನೀಡುವುದು ನನಗೆ ಪ್ರೀತಿ;

ಕೆರೆಯ ಬೇಡ ನನ್ನೆದೆಯ,

ತುಮುಲದ ವಿಕಾರ ಆಕೃತಿ.

 

ವಿಷ ಕಕ್ಕುವ ಮಾತನ್ನು ಧಿಕ್ಕರಿಸಿ,

ದಕ್ಕುವುದು ನಿಮಗೆ ಸನ್ಮತಿ;

ಸುಧಾರಣೆಯಾಗದಿದ್ದರೆ ದೊರಕುವುದು,

ಭೂಮಿಯ ಮೇಲೆ ನರಕದ ಗತಿ.

 

ಸಕಲ ಅಣುಕಣ ಜೀವರಾಶಿಯ,

ಜೀವಕ್ಕೆ ಜವಾಬ್ದಾರಿಯ ಒಡತಿ;

ನಿಮ್ಮೆಲ್ಲರ ಕಾರ್ಯದಿಂದ,

ನನ್ನನ್ನು ಮಾಡಿ ಭಾಗ್ಯವತಿ.

 

ನಾನು ಹಡೆದವ್ವ.....

ಹೆಸರು ಪ್ರಕೃತಿ ಮಾತೆ....

 

- ವಿಭಾ ರಾಗೌ

Enjoyed this article? Stay informed by joining our newsletter!

Comments

You must be logged in to post a comment.

About Author