ಸ್ತ್ರೀಯೊಡನೆ ಪುರುಷನ ಸಮಾಗಮವಾಗುವಾಗ ಪುರುಷನಿಗಿಂತಲೂ ಸ್ತ್ರೀಗೇ ಅಧಿಕವಾಗಿ ಸುಖ ಸಿಗುತ್ತದೆ

ಸ್ತ್ರೀಯೊಡನೆ ಪುರುಷನ ಸಮಾಗಮವಾಗುವಾಗ ಪುರುಷನಿಗಿಂತಲೂ ಸ್ತ್ರೀಗೇ ಅಧಿಕವಾಗಿ ಸುಖ ಸಿಗುತ್ತದೆ, ಕತೇ ಓದಿ ಅಭಿಪ್ರಾಯ ತಿಳಿಸಿ.

 

ಹಿಂದೆ ಋತುಪರ್ಣ ಎನ್ನುವ ರಾಜನಿದ್ದ. ಇವನ ಕತೆ ನಳಚರಿತ್ರೆಯಲ್ಲಿ ಬರುತ್ತದೆ. ಆತನ ಮಗ ಭಂಗಾಸ್ವನ. ಭಂಗಾಸ್ವನನಿಗೆ ಮಕ್ಕಳಿರಲಿಲ್ಲ. ಮಕ್ಕಳನ್ನು ಪಡೆಯಲು ಅಗ್ನಿಸ್ತೋಮ ಎಂಬ ಯಾಗವನ್ನು ಮಾಡಿದ. ಈ ಅಗ್ನಿಸ್ತೋಮ ಯಾಗದಿಂದ ರಾಜ ಬಲಿಷ್ಠನಾಗಬಹುದು ಎಂದು ದೇವೇಂದ್ರನಿಗೆ ಆತಂಕ ಭಯಗಳು ಶುರುವಾದವು. ಅವನು ಭಂಗಾಸ್ವನನನ್ನು ಹಣಿಯಲು ದಿನ ಕಾಯುತ್ತಿದ್ದ.

 

ಭಂಗಾಸ್ವನ ಒಮ್ಮೆ ಬೇಟೆಗಾಗಿ ಹೋದ. ಕುದುರೆಯು ಆತನನ್ನು ಕಾಡಿನಲ್ಲಿ ಬಲುದೂರ ಕೊಂಡೊಯ್ದುಬಿಟ್ಟಿತು. ಅವನು ಏಕಾಂಗಿಯಾಗಿ ಸುತ್ತಾಡಿದ. ಅವನು ದಣಿವು ಹಸಿವು ಬಾಯಾರಿಕೆಗಳಿಂದ ಬಳಲಿದ. ಹೀಗೆ ಸುತ್ತಾಡುತ್ತಿದ್ದಾಗ ರಾಜನು ಒಂದು ಸರೋವರವನ್ನು ನೋಡಿದ. ಕೂಡಲೇ ಕುದುರೆಯ ಮೈತೊಳೆದು ನೀರು ಕುಡಿಸಿ ಒಂದು ಮರಕ್ಕೆ ಕಟ್ಟಿ, ತಾನೂ ಕೂಡ ಆ ಸರೋವರದಲ್ಲಿ ಸ್ನಾನ ಮಾಡಿದ.

ಕೂಡಲೇ ಅವನು ಹೆಂಗಸಾಗಿಬಿಟ್ಟ!

 

ಇದನ್ನು ಗಮನಿಸಿದ ಭಂಗಾಸ್ವನನಿಗೆ ನಾಚಿಕೆಯಾಯಿತು. ಆದರೂ ಸಾವರಿಸಿಕೊಂಡು ಕುದುರೆಯನ್ನೇರಿ ರಾಜ್ಯಕ್ಕೆ ಹಿಂದಿರುಗಿದ. ಅವನಿಗಾಗಲೇ ಯಾಗದ ಪರಿಣಾಮ ನೂರು ಮಕ್ಕಳು ಹುಟ್ಟಿದ್ದರು. ಭಂಗಾಸ್ವನನ ಮಕ್ಕಳು, ಪತ್ನಿಯರು, ಪ್ರಜೆಗಳೆಲ್ಲರೂ ಸ್ತ್ರೀರೂಪನಾಗಿದ್ದ ತಮ್ಮ ರಾಜನನ್ನು ನೋಡಿ ಆಶ್ಚರ್ಯಚಕಿತರಾದರು. ಆತ ಪ್ರಜೆಗಳಿಗೆ ನಡೆದ ಸಮಾಚಾರವನ್ನು ತಿಳಿಸಿದ. ನಂತರ, 'ನೀವು ರಾಜ್ಯವನ್ನು ಆಳಿರಿ' ಎಂದು ಮಕ್ಕಳಿಗೆ ಹೇಳಿ ತಾನು ಕಾಡಿಗೆ ಮರಳಿದ.

 

ಹಾಗೆ ಕಾಡಿಗೆ ಹೋದವನು ಅಲ್ಲಿ ತೇಜಸ್ವಿಯಾದ ಒಬ್ಬ ಯುವ ತಪಸ್ವಿಯನ್ನು ನೋಡಿ, ಆಕರ್ಷಿತನಾದ(ಳು). ಆತನೊಂದಿಗೆ ಕೂಡಿ, ಅವನದೇ ಆಶ್ರಮದಲ್ಲಿ ಜೊತೆಗಿದ್ದಳು. ಅವರಿಬ್ಬರ ಸಮಾಗಮದಿಂದ ಮತ್ತೆ ನೂರು ಮಕ್ಕಳು ಹುಟ್ಟಿದರು.

 

ನಂತರ ಈ ಭಂಗಾಸ್ವನಳು ತನಗೆ ತಪಸ್ವಿಯಲ್ಲಿ ಹುಟ್ಟಿದ ನೂರು ಮಕ್ಕಳನ್ನೂ ಕರೆದುಕೊಂಡು ಮರಳಿ ತನ್ನ ರಾಜ್ಯಕ್ಕೆ ಬಂದು, ಅವರನ್ನೂ ಅರಮನೆಗೆ ಸೇರಿಸಿದಳು. 'ನೀವೆಲ್ಲರೂ ಒಗ್ಗಟ್ಟಾಗಿ ರಾಜ್ಯವನ್ನು ಆಳುತ್ತಿರಿ' ಎಂದು ಉಪದೇಶಿಸಿ ಭಂಗಾಸ್ವನೆ ಮತ್ತೆ ಕಾಡಿಗೆ ಹೊರಟುಹೋದಳು.

 

ಆದರೆ ದೇವೇಂದ್ರನಿಗೆ ಈ ಮಕ್ಕಳ ನಡುವೆ ಇದ್ದ ಒಗ್ಗಟ್ಟನ್ನು ಕಂಡು ಹೊಟ್ಟೆಕಿಚ್ಚು. ಅವನು ಅವರಲ್ಲಿ ಒಡಕು ಉಂಟುಮಾಡುತ್ತಾನೆ. ಅದರಿಂದಾಗಿ ಆ ಮಕ್ಕಳು ಪರಸ್ಪರ ಹೊಡೆದಾಡಿ ಸತ್ತು ಹೋದರು. ಇದನ್ನು ತಿಳಿದು ಭಂಗಾಸ್ವನೆ ಜೋರಾಗಿ ಅಳತೊಡಗುತ್ತಾಳೆ.

ಇದನ್ನು ಕಂಡು ಕರಗಿದ ದೇವೇಂದ್ರ ಭಂಗಾಸ್ವನೆಯ ಬಳಿಗೆ ಬಂದ. ನಿನ್ನ ಮಕ್ಕಳನ್ನು ಬದುಕಿಸಿ ಕೊಡುತ್ತೇನೆ. ಆದರೆ ನೂರು ಮಕ್ಕಳನ್ನು ಮಾತ್ರ ಬದುಕಿಸಲು ಸಾಧ್ಯವಿದೆ. ನೀನು ಪುರುಷನಾಗಿದ್ದಾಗ ಹುಟ್ಟಿಸಿದ ನೂರು ಮಕ್ಕಳು ಬೇಕೋ? ಅಥವಾ ಸ್ತ್ರೀಯಾಗಿದ್ದಾಗ ಪಡೆದ ನೂರು ಮಕ್ಕಳು ಬೇಕೋ ಎಂದು ಕೇಳುತ್ತಾನೆ.

 

ನಾನು ಈ ಸ್ತ್ರೀರೂಪವನ್ನು ಧರಿಸಿದ ನಂತರ ನನ್ನಲ್ಲಿ ಯಾವ ನೂರು ಮಕ್ಕಳು ಹುಟ್ಟಿದರೋ ಅವರೇ ಬದುಕಲಿ ಎನ್ನುತ್ತಾಳೆ ಭಂಗಾಸ್ವನೆ.

 

ಹಾಗಾದರೆ ನೀನು ಪುರುಷನಾಗಿದ್ದಾಗ ನಿನ್ನಿಂದಲೇ ಹುಟ್ಟಿದ ಮಕ್ಕಳು ಯಾಕೆ ಬೇಡ ? ಹೆಂಗಸಾದ ನಂತರ ನಿನ್ನಲ್ಲಿ ಹುಟ್ಟಿದ ಮಕ್ಕಳ ವಿಷಯದಲ್ಲಿ ನಿನಗೆ ಹೆಚ್ಚಿನ ಪ್ರೀತಿಯು ಹೇಗುಂಟಾಯಿತು? ಎಂದು ದೇವೇಂದ್ರ ಕೇಳಿದ.

ಸ್ತ್ರೀಯರಿಗೆ ಸ್ವಾಭಾವಿಕವಾಗಿಯೇ ಮಕ್ಕಳ ಮೇಲೆ ಅಧಿಕವಾದ ಪ್ರೀತಿಯಿರುತ್ತದೆ. ಪುರುಷರಿಗೆ ಅಷ್ಟು ಅಗಾಧವಾದ ಪ್ರೀತಿಯಿರುವುದಿಲ್ಲ. ನಾನೀಗ ಸ್ತ್ರೀಯಾಗಿರುವುದರಿಂದ ಸಹಜವಾಗಿಯೇ ನನ್ನಲ್ಲಿ ಹುಟ್ಟಿದ ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದುದರಿಂದ ಸ್ತ್ರೀರೂಪವನ್ನು ಹೊಂದಿದನಂತರ ನನ್ನಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ ಎಂದು ಭಂಗಾಸ್ವನೆ ಪ್ರಾರ್ಥಿಸಿದಳು.

 

ಇಂದ್ರ ಸಂತುಷ್ಟನಾಗಿ ನಿನ್ನ ಎಲ್ಲ ಮಕ್ಕಳೂ ಬದುಕಲಿ. ನೀನು ನನ್ನಿಂದ ನಿನ್ನ ಇಷ್ಟವಿರುವ ಇನ್ನೂ ಒಂದು ವರವನ್ನು ಕೇಳು ಎಂದು ಕೇಳಿದ. ನೀನು ಪುನಃ ಪುರುಷನಾಗಲು ಇಚ್ಛಿಸುವೆಯಾ? ಹೆಂಗಸಾಗಿಯೇ ಇರುವೆಯಾ? ನೀನು ಯಾವುದನ್ನು ಅಪೇಕ್ಷಿಸುವೆಯೆಂಬುದನ್ನು ಹೇಳು- ಎಂದ.

ಭಂಗಾಸ್ವನೆ ಹೇಳಿದಳು- ನಾನು ಹೆಂಗಸಾಗಿಯೇ ಇರಬೇಕೆನ್ನುವ ವರವನ್ನು ನಿನ್ನಿಂದ ಕೇಳಿಕೊಳ್ಳುತ್ತೇನೆ. ನಾನು ಪುನಃ ಪುರುಷತ್ವವನ್ನು ಇಚ್ಛಿಸುವುದಿಲ್ಲ ಎನ್ನುತ್ತಾಳೆ. ಅದಕ್ಕೆ ಕಾರಣವನ್ನು ಹೀಗೆ ನೀಡುತ್ತಾಳೆ- ಸ್ತ್ರಿಯಾಃ ಪುರುಷ ಸಂಯೋಗೇ ಪ್ರೀತಿರಭ್ಯಧಿಕಾ ಸದಾ | ಏತಸ್ಮಾತ್ಕಾರಣಾಚ್ಛಕ್ರ ಸ್ತ್ರೀತ್ವಮೇವ ವೃಣೋಮ್ಯಹಮ್- ಸ್ತ್ರೀಯೊಡನೆ ಪುರುಷನ ಸಮಾಗಮವಾಗುವಾಗ ಪುರುಷನಿಗಿಂತಲೂ ಸ್ತ್ರೀಗೇ ಅಧಿಕವಾಗಿ ಸುಖ ಸಿಗುತ್ತದೆ. ಈ ಕಾರಣದಿಂದಲೇ ನಾನು ಹೆಂಗಸಾಗಿಯೇ ಇರಬೇಕೆಂಬ ವರವನ್ನು ನಿನ್ನಿಂದ ಅಪೇಕ್ಷಿಸುತ್ತೇನೆ ಎನ್ನುತ್ತಾಳೆ.

 

'ರಮಿತಾಭ್ಯಧಿಕಂ ಸ್ತ್ರೀತ್ವೇ ಸತ್ಯಂ ವೈ ದೇವಸತ್ತಮ | ಸ್ತ್ರೀಭಾವೇನ ಹಿ ತುಷ್ಯಾಮಿ ಗಮ್ಯತಾಂ ತ್ರಿದಶಾಧಿಪ' ನಾನು ಸತ್ಯವಾಗಿ ಹೇಳುತ್ತೇನೆ. ಸ್ತ್ರೀತ್ವದಲ್ಲಿಯೇ ನಾನು ಹೆಚ್ಚಿನ ರತಿಸುಖವನ್ನು ಅನುಭವಿಸಿದ್ದೇನೆ. ಆದುದರಿಂದ ನಾನು ಸ್ತ್ರೀಭಾವದಿಂದಲೇ ಸಂತುಷ್ಟಳಾಗಿದ್ದೇನೆ ಎನ್ನುತ್ತಾಳೆ ಭಂಗಾಸ್ವನೆ. ಇಂದ್ರ ಆಕೆಯ ವರವನ್ನು ಈಡೇರಿಸಿದ.

 

ಹಾಗಾಗಿ ಸ್ತ್ರೀಯರಿಗೆ ಪ್ರಕೃತಿಯೇ ಅಧಿಕ ಸುಖ ಪಡೆಯುವ ಸಾಮರ್ಥ್ಯ, ವರವನ್ನು ಕರುಣಿಸಿದೆ. ಹಾಗಾಗಿ ಸ್ತ್ರೀ ಜನ್ಮವೇ ಧನ್ಯ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author