ಸ್ತ್ರಿ ಎಂದರೆ ........... ಅಷ್ಟೇ ಸಾಕೇ?

ಸೃಷ್ಟಿಯ ಜೀವಂತ ಕಾವ್ಯವೇ ಹೆಣ್ಣು, ಹೌದು ಇದೊಂದು ಪೀಠಿಕೆ ಸಾಕು. ಎಲ್ಲ ಸ್ತ್ರೀ ಕುಲದ ಭಾವಗಳು ಚಿಗುರೊಡೆದು ಜೀವ ತಳೆಯಲು. ಭಗವಂತನ ಸೃಷ್ಟಿಯಲ್ಲಿ ಹೆಣ್ಣೊಂದು ವರವೋ ಶಾಪವೋ ತಿಳಿಯದಾಗಿದೆ .ಆದರೆ ಗಂಡಿಗಿಂತ ವಿಶೇಷ ,ವಿಶಿಷ್ಟ ,ವಿಭಿನ್ನ ಶಕ್ತಿಯೊಂದು ಹೆಣ್ಣಲ್ಲಿದೆ ಎಂಬುದಂತೂ ಸುಳ್ಳಲ್ಲ . ಗರ್ಭಿಣಿ ಸ್ತ್ರೀಯರಿಗೆ ತುಂಬಾ ಹಸಿವಾಗುವುದು ಮತ್ತು ತಿಂದ ಆಹಾರವೆಲ್ಲ ಸರಾಗವಾಗಿ ಜೀರ್ಣವಾಗುವುದು ಮತ್ತು ಗರ್ಭಿಣಿ ಸ್ತ್ರೀಯರು ಬಿಳುಪಾಗಿ ಕಳೆ ತುಂಬಿದಂತೆ ಕಂಡಾಗ ಹಿರಿಯರು ಹೇಳುತ್ತಾರೆ ಹುಟ್ಟಲಿರುವ ಮಗು ಹೆಣ್ಣೆಂದು. ವೈಜ್ಞಾನಿಕವಾಗಿಯೂ ಕೆಲವು ಅಂಶಗಳಿವೆ ಇದಕ್ಕೆ ಪುಷ್ಟಿ ನೀಡುವಂತೆ. ಹೆಣ್ಣು ಮಗುವಿನ ಕರುಳು ದೊಡ್ಡದಿರುತ್ತದೆ ಗಂಡು ಮಗುವಿನ ಕರುಳಿಗಿಂತ ,ಆದ್ದರಿಂದ ಹೆಣ್ಣು ಮಗು ಸರಾಗವಾಗಿ ಎಲ್ಲವನ್ನೂ ಜೀರ್ಣಿಸಿ ಕೊಳ್ಳುತ್ತಾಳೆ ಎಂದು.

 

ಅಂದರೆ ಬರೀ ಆಹಾರವನ್ನಲ್ಲ ಮುಂದೊಂದು ದಿನ ಹೆಣ್ಣು ಜೀವ ತಳೆದು ಭೂಮಿಗೆ ಬಂದಾಗ "ಅಯ್ಯೋ ಹೆಣ್ಣು ಮಗು ಆಯಿತಲ್ಲ " ಎಂದು ಯಾರಾದರೂ ಕಡೆಗಣಿಸಿದರೆ, ಮೈಕೈ ತುಂಬಿ ಬೆಳೆದು ನಿಂತಾಗ ತಮ್ಮ ಕಾಮತೃಷೆಗಾಗಿ ಕೆಕ್ಕರಿಸಿ ನೋಡಿದರೆ ,ಮದುವೆಯಾದ ನಂತರ ಗಂಡ ಹೆಣ್ಣನ್ನು ಹೀನಾಯವಾಗಿ ನಡೆಸಿಕೊಂಡರೆ ,ಅವಳಲ್ಲೊಂದು ಬೀಜ ಬಿತ್ತಿ ,ತಾನೇ ಹೊರೆಯಾಗಿ ಪರಿಣಮಿಸಿದರೆ , ತನ್ನ ಮಡಿಲೊಳಗೆ ಮತ್ತೊಂದು ಜೀವ ಕವಲೊಡೆದು ಮಿಸು ಕಾಡಿದರೆ ,ನಂತರ ಅದರ ಪಾಲನೆ ಪೋಷಣೆಯಲ್ಲೇ ತನ್ನೆಲ್ಲ ಬದುಕು ಬವಣೆಯಲ್ಲೇ ಅಂತ್ಯಗೊಂಡರೆ , ಇದನ್ನೆಲ್ಲವನ್ನೂ ಅರಗಿಸಿಕೊಳ್ಳುತ್ತಾಳೆ. ಮತ್ತು ಅರಗಿಸಿಕೊಂಡಾ ಗಲಷ್ಟೇ ಅವಳೊಂದು ಹೆಣ್ಣಾಗಲು ಸಾಧ್ಯ .

ಈಗ ಹೇಳಿ ಹೆಣ್ಣು ಜನ್ಮ ವರವೋ ಶಾಪವೋ 

 

 

ಮಾನವ ಜನ್ಮ ದೇವರು ಕೊಟ್ಟ ಭಿಕ್ಷೆ . ಜನ್ಮ ನೀಡುವವಳು ತಾಯಿ ,ಬದುಕು ಕಲಿಸುವವನು ತಂದೆ ,ಬದುಕಿನ ಪ್ರತಿ ಹಂತದಲ್ಲೂ ನಾವು ನಿರ್ಭಯವಾಗಿ ಮುನ್ನಡೆಯಲು ಹೆಗಲು ಕೊಟ್ಟು ನಿಲ್ಲುವವರು ತಂದೆ ತಾಯಿಗಳು .ಆದರೂ ಕೂಡ ನಮ್ಮ ಬದುಕನ್ನು ಸುಂದರವಾಗಿಯೂ ಬಲಿಷ್ಠವಾಗಿಯೇ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ. ಜೀವನದುದ್ದಕ್ಕೂ ಹೆತ್ತವರು ನಮಗೆ ಒಳ್ಳೆಯದನ್ನೆ ಬಯಸಬಹುದು ,ಹರಸಬಹುದು .ಆದರೆ ಹಾಲುಣಿಸಿದ ವರಿಗೆ ಹಣೆಬರಹ ಬರೆಯುವ ಶಕ್ತಿಯನ್ನು ಭಗವಂತ ಕೊಡಲಿಲ್ಲ .ಬದುಕಿನ ಒಂದು ಹಂತದ ನಂತರ ನಮ್ಮ ಬದುಕಿನ ಸಂಪೂರ್ಣ ಹೊಣೆ ನಮ್ಮದೇ .

 

ಜೀವನದಲ್ಲಿ ನೋವು ನಲಿವು ಎರಡು ಹಗಲು ಇರುಳಿನಷ್ಟೆ ಸಹಜ. ಇವೆರಡೂ ಜೀವನದಲ್ಲಿ ಸಮ ಸಮವಾಗಿರಬೇಕು. ಆದರೆ ನೋವು ನಲಿವು ಎರಡನ್ನೂ ಗಂಡು ಹೆಣ್ಣಿನ ಮಧ್ಯೆ ಸಮಸಮವಾಗಿ ಹಂಚಬೇಕಿತ್ತು .ಆ ಹಂಚುವಿಕೆ ಯನ್ನು ಭಗವಂತ ಮರೆತಿದ್ದಾನೆ ಎನಿಸುತ್ತದೆ .ಇದಕ್ಕೆ ರೂವಾರಿಗಳಂತೆ ಹಲವಾರು ಪಾತ್ರಗಳು ನಮ್ಮ ಕಣ್ಣ ಮುಂದೆಯೇ ಸುತ್ತುತ್ತಿವೆ ಹೆಣ್ಣಿನ ಜೀವನದಲ್ಲಿ ಮಹತ್ವದ ತಿರುವು ಎಂದರೆ ಮದುವೆ .

ಆ ಮದುವೆಯ ಹಿಂದಿನ ಆಸೆ ,ಕನಸು ,ಸಂಭ್ರಮ ಹರಕೆಗಳು ,ಹೇಳತೀರದಷ್ಟು ಹೀಗೆ ಹೆಣ್ಣಿಗೊಂದು ಗಂಡು ಜೊತೆ ಸಿಕ್ಕಾಯ್ತು ,ದಾಂಪತ್ಯ ಇವರಿಬ್ಬರನ್ನು ಆರಿಸಿ ಹರಸಿದ ದಾಗಿತ್ತು .ಜೀವನಗಳೆರಡೂ ಬೆಸೆದುಕೊಂಡಿದ್ದವು. ಇದಕ್ಕೆ ಕೊಂಡಿ ಎಂಬಂತೆ ವರುಷದೊಳಗೆ ಮಡಿಲ ಅಲ್ಲೊಂದು ಪುಟ್ಟ ಕಂದ. ಇಬ್ಬರನ್ನು ಮೂರಾಗಿ ಸಿತ್ತು .ಆಡಂಬರ ,ಆಚರಣೆಗಳು ಇಲ್ಲದಿದ್ದರೂ ಮೂರು ಹೊತ್ತಿನ ಗಂಜಿಯನ್ನು ಹಂಚಿ ಉಂಡು ಸುಖ ಸಂಸಾರ ಸಾಗುತ್ತಿತ್ತು .ಯಾರ ವಕ್ರ ದೃಷ್ಟಿಯೂ ಅಥವಾ ಭಗವಂತನ ಸೃಷ್ಟಿಯೋ ಬರ ಸಿಡಿಲೊಂದು ಅಪ್ಪಳಿಸಿತು .ಈ ಸಂಸಾರವೆಂಬ ಗುಬ್ಬಿ ಗೂಡಿಗೆ ,ಮನೆಯ ಯಜಮಾನನನ್ನು ಕರೆದೊಯ್ದಿತ್ತು. ವಿದಿ ಮಸಣದ ದಾರಿಗೆ .ಹೇಗೆ ಮರೆಯಲಿ ನನ್ನವರನ್ನು ಹೇಗೆ ಸವೆಸಲಿ ಮುಂದಿನ ಅಗಾಧ ದಾರಿಯ ಎಳೆದುಕೊಂಡು ಈ ಸಂಸಾರವೆಂಬ ಬಂಡಿಯನ್ನು. ಎಲ್ಲವನ್ನೂ ಮರೆತು ಬಾಳ ಬೇಕೆನ್ನುವವರು ಹಿತೈಷಿಗಳು, ಕಣ್ಣ ಮುಂದಿದೆ ನಾಲ್ಕು ವರ್ಷದ ಕಂದ .ನನ್ನ ವರದೆ ಪಡಿ ಹೆಚ್ಚು ಹೇಗೆ ಮರೆಯಲಿ ಕಣ್ಣ ಮುಂದಿದೆ ಜೀವಂತ ನೆನಪೊಂದು. ಎಲ್ಲಿ ಮರೆಮಾಚಲಿ ,ಎಲ್ಲವನ್ನು ಬಿಟ್ಟು ಸಾಯ ಬೇಕೆಂದಿದ್ದೆ ಯಾರೋ ಒದ್ದಂತಾಯಿತು ಒಡಲೊಳಗೆ ,ಕೊನೆಗೆ ವೈದ್ಯ ಹೇಳಿದರೂ ನಾನು ಗರ್ಭಿಣಿ ಎಂದು. ನೀರೇ ಇಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯಿತು ,ಆದರೂ ಬದುಕಬೇಕಲ್ಲ ನಮ್ಮ ನಿವೃತ್ತಿಯ ಅವಧಿ ಮುಗಿಯುವವರೆಗೆ .ಎಲ್ಲ ನೋವನ್ನು ನುಂಗಿ ಬದುಕಬೇಕೆಂದು ನಿರ್ಧರಿಸಿದ್ದೆ ಅದನ್ನು ಬಿಟ್ಟು ಮತ್ತಾವ ದಾರಿಯೂ ಇರಲಿಲ್ಲ ನನ್ನ ಕಣ್ಣೆದುರಿಗೆ .

ಮಡಿಲು ತುಂಬಿ ಮುತ್ತೈದೆಯಾಗಿ ಎಂದು ಅರಸಿ ಕಳಿಸಿದ ತಂದೆ ತಾಯಿ ಎದುರು ಬಂದು ನಿಂತಿದ್ದೇ ಎಲ್ಲಾ ಸೌಭಾಗ್ಯಗಳನ್ನು ಕಳೆದುಕೊಂಡು ಮಡಿಲೊಳಗೆ ಎರಡು ಕಂದಮ್ಮಗಳ ಹೊತ್ತುಕೊಂಡು.

ಈಗ ಹೇಳಿ ಹೆಣ್ಣು ಜನ್ಮ ವರವೋ ಶಾಪವೋ 

 

ಮಕ್ಕಳ ಉನ್ನತ ವಿದ್ಯಾಭ್ಯಾಸ ಪ್ರತಿ ಪೋಷಕರ ಕನಸಾಗಿರುತ್ತದೆ .ಆ ಸಾಲಿನಿಂದ ನನ್ನ ತಂದೆ ತಾಯಿಗಳು ಹೊರತಲ್ಲ .ಸಮಾಜದ ಈ ಬೆಳವಣಿಗೆಯ ನಾಗಾಲೋಟದಲ್ಲಿ ನಾವೂ ಕೂಡ ಮುಂಚೂಣಿಯಲ್ಲಿರಬೇಕು ಎಂಬ ,ಸಹಜ ಆಸೆಗಳಿಗೆ ಕಟ್ಟುಬಿದ್ದು ಹಗಲು ರಾತ್ರಿ ಎನ್ನದೇ ನನ್ನಪ್ಪ ಎಳೆಯುತ್ತಿದ್ದಾರೆ ಈ ಸಂಸಾರವೆಂಬ ಬಂಡಿಯನ್ನು .ಅವರ ಪ್ರತಿ ಬೆವರಿನ ಹನಿಗೂ ,ಕಣ್ಣ ಕಂಬನಿಗೂ ಜೊತೆಯಾಗಿ ಜೀವನ ಸಾಗಿಸುತ್ತಿದ್ದಾಳೆ ನನ್ನಮ್ಮ .ಬರುವ ಸಂಬಳದಲ್ಲಿಯೇ ನಮ್ಮ ಭವಿಷ್ಯಗಳನ್ನು ಕಟ್ಟುತ್ತಾ ಮೂರು ಹೊತ್ತಿನ ಗಂಜಿಗೆ ದಾರಿ ಮಾಡುತ್ತಾ ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದಾರೆ .ಇದ್ಯಾವುದರ ಪರಿವೇ ಇಲ್ಲದೆ ವಯಸ್ಸಿನ ಸಹಜ ಆಸೆಗಳು ಬೆನ್ನೇರಿ ದಾರಿ ತಪ್ಪುವ ಹಂತದಲ್ಲಿದ್ದಾನೆ ನನ್ನ ತಮ್ಮ .ಇದೆಲ್ಲವೂ ಅರ್ಥವಾದರೂ ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿ ನನ್ನದು .ನನ್ನೆಲ್ಲಾ ಕೋಪ ,ಅಸಹಾಯಕತೆ ,ಕಣ್ಣೀರು ,ನಿರಾಸೆಗಳ ನ್ನೆಲ್ಲಾ ಒಟ್ಟು ಮಾಡಿ ಓದಿನ ಹಸಿವಾಗಿಸಿ, ಅಪ್ಪನ ಆಣತಿಯಂತೆ ನಾನು ರ್ಯಾಂಕ್ ಬಂದಿದ್ದೆ .ನಾನೀಗ ಇಂಜಿನಿಯರ್ ಪದವೀಧರೆ ಸಾರ್ಥಕವಾಯಿತು ಬದುಕು .ಇನ್ನಾದರೂ ಅಪ್ಪನ ಜವಾಬ್ದಾರಿಗಳಿಗೆ ನಾನು ಹೆಗಲು ನೀಡಬಹುದು ಎಂಬ ಖುಷಿಯಲ್ಲಿದ್ದೆ. ಕಿಂಚಿತ್ತಾದರೂ ಅಪ್ಪನ ಋಣವನ್ನು ತೀರಿಸಬೇಕು ಎಂದಿದ್ದೆ .ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ದೊರಕಿತ್ತು ಕೈತುಂಬಾ ಸಂಬಳ ಸಿಗುತ್ತಿತ್ತು. ಆದರೆ ಇಷ್ಟು ದಿನದಿಂದ ಸಂಸಾರ ಭಾರ ಹೊತ್ತ ಅಪ್ಪನ ಭುಜಗಳು ಕುಸಿದು ಹೋಗಿದ್ದವು .ಕೈ ಕಾಲುಗಳು ವಿಶ್ರಮಿಸಲು ಹವಣಿಸುತ್ತಿದ್ದವು .ಅಪ್ಪನಿಗೆ ಸ್ಟ್ರೋಕ್ ಹೊಡೆದಿತ್ತು .ಆದರೂ ಕಂಗೆಡಲಿಲ್ಲ ನನ್ನ ಬಳಿ ಅಪ್ಪ ಕೊಡಿಸಿದ ಬೆಲೆ ಬಾಳುವ ಯಾರೂ ಕಸಿದುಕೊಳ್ಳಲಾಗದ ಒಡವೆಯೊಂದಿತ್ತು (ವಿದ್ಯಾಭ್ಯಾಸ )ಅದಕ್ಕೆ ನಮ್ಮ ಸಂಸಾರವನ್ನು ಸಾಕುವ ದಾರಿ ತಿಳಿದಿತ್ತು .ಈಗ ಸಂಸಾರದ ಚುಕ್ಕಾಣಿ ಸಂಪೂರ್ಣವಾಗಿ ನನ್ನ ಕೈಗೆ ಹಸ್ತಾಂತರವಾಗಿತ್ತು.ಆದರೆ ಸಂಬಳ ಕೊಡುತ್ತಿದ್ದ ನನ್ನ ಉದ್ಯೋಗ ಬದಲಾಗಿ ಕೇಳುತ್ತಿದದ್ದು ನನ್ನ ಡಿಗ್ರಿ ಗಳನ್ನಲ್ಲ ಅಥವಾ ನನ್ನ ಮಾರ್ಕ್ಸ್ ಕಾರ್ಡ್ ಗಳನ್ನಲ್ಲ ಬದಲಿಗೆ ನನ್ನ ಮೇಲ್ದರ್ಜೆಯ ಅಧಿಕಾರಿಗಳು ಬಯಸಿದ್ದು ನೀ ಕೊಡಿಸಿದ ಈ ವಿದ್ಯಾಭ್ಯಾಸವನ್ನಲಪ್ಪ ,ನೀ ಸೃಷ್ಟಿಸಿದ ಈ ಹೆಣ್ಣು ದೇಹವನ್ನು. ಬಿಟ್ಟು ಬಿಡಲಿ ಯಾವುದನ್ನು ಹೇಳು, ನನ್ನ ಶೀಲವನ್ನ ಅಥವಾ ನನ್ನ ಸಂಸಾರಕ್ಕೆ ಆಧಾರವಾಗಿರುವ ಈ ಉದ್ಯೋಗವನ್ನ.

ಈಗ ಹೇಳಿ ಹೆಣ್ಣು ಜನ್ಮ ವರವೋ ಶಾಪವೋ 

 

ಹೆಣ್ಣಿಗೂ ಸೌಂದರ್ಯಕ್ಕೂ ಯಾವುದೋ ಜನ್ಮದ ನಂಟಿದೆ. ಬಡವರ ಮನೆಯ ಹೆಣ್ಣು ಮಕ್ಕಳು ಚಂದ ಎನ್ನುವ ಮಾತಿಗೆ ಸಾಕ್ಷಿಯಂತಿದೆ ನಾ .ಆದರೆ ಮುಂದೊಂದು ದಿನ ಈ ಸೌಂದರ್ಯವೇ ನನಗೆ ಉರುಳಾಗಿ ಪರಿಣಮಿಸುತ್ತದೆ ಎಂಬುದನ್ನು ನಾ ತಿಳಿದಿರಲಿಲ್ಲ .ಅಪ್ಪ ಅಮ್ಮನ ಮುದ್ದಿನ ಮಗಳು ನಾ .ಈ ಗೊಂಬೆ ಗೊಂದು ರಾಜಕುಮಾರನ ತಂದು ಮದುವೆ ಮಾಡಿಯಾಗಿತ್ತು .ನಾನು ಸುಂದರವಾಗಿರುವುದು ನನ್ನ ಗಂಡನಿಗೆ ಕೆಲವೊಮ್ಮೆ ಖುಷಿ ಕೊಟ್ಟಿದ್ದು ನಿಜ, ಆದರೆ ಮತ್ತೊಮ್ಮೆ ದ್ವೇಷ ಹುಟ್ಟಿಸಿದ್ದು ನಿಜ. ಎಲ್ಲರಂತೆ ನನ್ನ ಮದುವೆಯ ಮೊದಲ ದಿನಗಳು ಚೆನ್ನಾಗಿದ್ದವು ನಿಜ. ಆಸೆ ,ಕನಸು ,ಹರಕೆಗಳು ಎಲ್ಲಕ್ಕೂ ಜೀವ ಬಂದಂತಿತ್ತು. ಆದರೆ ಕೆಲವು ದಿನಗಳ ನಂತರ ನನ್ನವರ ಪ್ರೀತಿ, ಕಾಳಜಿ ,ಅವಮಾನ ,ಬೈಗುಳ ,ಹೊಡೆತ ಎಲ್ಲವುಗಳಿಂದ ರೋಸಿ ಹೋಗಿದ್ದೆ ನಾ.ಎಷ್ಟೋ ಬಾರಿ ಮನೆಯಿಂದ ಹೊರಗೆ ಹಾಕಿ ಬಾಗಿಲ ಬೀಗ ಹಾಕಿ ಬಿಡುತ್ತಿದ್ದ ನನ್ನವ . ರಾತ್ರಿಯೆಲ್ಲಾ ಮನೆಯ ಬಾಗಿಲಲ್ಲಿ ಕೂತು ಬಿಕ್ಕುತ್ತಿದ್ದೆ .ನನ್ನ ಯಾವ ತಪ್ಪಿಗೆ ಈ ಶಿಕ್ಷೆ ಎಂದು. ಸತಿಪತಿಗಳು ಒಂದಾಗಿ ,ನನ್ನವರಿಗಾಗಿ ನನ್ನ ಸರ್ವಸ್ವವನ್ನು ಅರ್ಪಿಸಿ ಹೊಸ ಜೀವ ವೊಂದನ್ನು ಹೊಸೆದು ಬೆಸೆದು ಈ ಭೂಮಿಗೆ ತರುವ ಮಿಲನ ಮಹೋತ್ಸವಕ್ಕೆ ಸಾಕ್ಷಿಯಾಗ ಬೇಕಾಗಿದ್ದ ನನ್ನವ ,ಪ್ರಾಣಿಯಂತೆ ಮೈಮೇಲೆ ಎರಗಿ ತನ್ನ ದಾಹವನ್ನು ತೀರಿಸಿಕೊಂಡ ಹೋಗುವ ಕ್ರೂರ ಮೃಗದಂತೆ ವರ್ತಿಸುತ್ತಿದ್ದ .ಯಾವುದೋ ಲಾರಿ ಕೆಳಗೆ ಸಿಕ್ಕಿ ನುಚ್ಚು ಗುಜ್ಜಲಆದಂತೆ ಅನ್ನಿಸುತ್ತಿತ್ತು ಮನಸ್ಸು ದೇಹ ಎರಡಕ್ಕೂ, ನನ್ನ ಯಾವ ನೋವು ಕಣ್ಣೀರಿಗೂ ಕರಗುತ್ತಿರಲಿಲ್ಲ .ಏಕೆಂದರೆ ನನ್ನ ನಿತ್ಯದ ಗೋಳಾಟ ಚೀರಾಟ ಅವನಿಗೆ ಅಭ್ಯಾಸವಾಗಿ ಹೋಗಿತ್ತು .ಎಲ್ಲವನ್ನೂ ಪ್ರತಿಭಟಿಸಬಲ್ಲೆ ,ಬೀದಿಗೆಳೆಯಬಲ್ಲೆ ಆದರೆ ಎಲ್ಲಿಯ ತನಕ? ನನ್ನ ಪೋಷಕರು ನನ್ನ ಬೆನ್ನಿಗಿರುವ ತನಕ ಅಥವಾ ನಾನು ಒಬ್ಬಳೇ ಏನೂ ಮಾಡಲಾರೆ ಎಂಬ ಸತ್ಯವನ್ನು ತಿಳಿಯುವ ತನಕ .

 

ಈಗ ಹೇಳಿ  ಹೆಣ್ಣು ಜನ್ಮ ವರವೋ ಶಾಪವೋ 

 

ಪ್ರತಿ ಹೆಣ್ಣಿನೊಳಗೊಂದು ಗೂಡು ಕಟ್ಟಿ ಅನ್ನ ಆಹಾರ ಹಂಚಿ ಪಾಲಾದ ಗಲೇ ಹೆಣ್ಣು ಮಾನಸಿಕವಾಗಿ ಮತ್ತು ದೈಹಿಕವಾಗಿ ತಾಯಿಯಾಗಲು ಅಣಿಯಾಗುತ್ತಾಳೆ .ಆದರೆ ಪ್ರತಿ ಒಬ್ಬ ಗಂಡಸು ತಂದೆ ಯಾಗಬೇಕೆಂಬ ಸಂಕೋಲೆಗಳೇನೂ ಇಲ್ಲ .ಅಪ್ಪನಾಗಲು ವುದೆಂದರೆ ಕೇವಲ ವೀರ್ಯಾಣುಗಳನ್ನು ಹೊರ ಹಾಕುವುದಷ್ಟೇ ಅಲ್ಲ ,ಬಿತ್ತ ಬೆಳೆಯನ್ನು ,ಹೊತ್ತ ಭೂಮಿಯನ್ನು ಕೊನೆಯವರೆಗೂ ಕಾಪಾಡುವವನು ಮಾತ್ರ ಅಪ್ಪನಾಗಲು ಸಾಧ್ಯ .ಸಂಸಾರಕ್ಕಾಗಿ ಹಗಲು ರಾತ್ರಿ ದುಡಿದು ತನಗಿಂತ ತನ್ನ ಸಂಸಾರವನ್ನೇ ಹೆಚ್ಚು ಪ್ರೀತಿಸುವ ಎಲ್ಲಾ ಅಪ್ಪಂದಿರನ್ನು ಹೊರತುಪಡಿಸಿ ,ತಮ್ಮ ನೋವನ್ನೆಲ್ಲ ಬಚ್ಚಿಟ್ಟು ಮಡದಿ ಮಕ್ಕಳ ಸಂತೋಷವನ್ನು ಮಾತ್ರ ಯೋಚಿಸುವ ಎಲ್ಲಾ ತಂದೆಯರ ಪಾದಗಳಿಗೆ ನಮಿಸಿ ಹೇಳುತ್ತಿದ್ದೇನೆ ,ಇನ್ನೂ ಎಷ್ಟೋ ಜನರಿದ್ದಾರೆ ಈ ಜಗದೊಳಗೆ ಕೇವಲ ಹೆಸರಿಗೆ ಮಾತ್ರ ಅಪ್ಪನಾಗಿ ಅಪ್ಪಂದಿರ ಯಾವ ಜವಾಬ್ದಾರಿಯನ್ನು ನಿಭಾಯಿಸಿದೆ ತಮ್ಮ ಸೌಕರ್ಯವನ್ನೇ ನೋಡಿಕೊಳ್ಳುತ್ತಿದ್ದಾರೆ ,ತಮ್ಮ ಕುಡಿತದ ಚಟಕ್ಕೆ ಮಡದಿ ಮಕ್ಕಳನ್ನು ಬೀದಿಪಾಲು ಮಾಡುತ್ತಿದ್ದಾರೆ ,ಕೇವಲ ಚಟ ಕ್ಕಷ್ಟೇ ಮದುವೆಯಾಗಿ ಮಗುವೊಂದನ್ನು ಕೈಗಿತ್ತು ಓಡಿ ಹೋಗುವವರಿದ್ದಾರೆ. ಪ್ರೀತಿಯ ಹೆಸರಲ್ಲಿ ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ಹೆಣ್ಣನ್ನು ಬಳಸಿ ಕೊಳ್ಳುವವರಿದ್ದಾರೆ .ಕೇವಲ ಹೆಣ್ಣೆಂಬ ಕಾರಣಕ್ಕೆ ನಮ್ಮನ್ನು ಗರ್ಭದಲ್ಲೇ ಚಿವುಟಿ ಹಾಕುವವರಿದ್ದಾರೆ ಮತ್ತು ತಮ್ಮ ವಯಸ್ಸಿನ ಆಸೆ ಗಳಿಗೋಸ್ಕರ ವಯಸ್ಸಿನ ಮಿತಿಯನ್ನು ನೋಡದೆ ಪುಟ್ಟ ಕಂದಮ್ಮಗಳ ಮೇಲೆ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ .ಎಲ್ಲವೂ ಒಳ್ಳೆಯದೇ ರಾಕ್ಷಸರು ಹೆಚ್ಚಿದಾಗಲಷ್ಟೇ ದೇವತೆಗಳು ಅವತರಿಸಲು ಸಾಧ್ಯ .ಸಮಸ್ಯೆಯ ಕಠೋರತೆ ಹೆಚ್ಚಿದಾಗಲಷ್ಟೇ ಅದಕ್ಕೆ ಸಿಗುವ ಉತ್ತರ ಕ್ಕೊಂದು ಬೆಲೆ ಆದರೆ ಅನಾಗರಿಕ ಗಂಡಸಿಗೂ ,ಸ್ಯಾಡಿಸ್ಟ್ ಗಳಿಗೂ ,ಅತ್ಯಾಚಾರಿಗಳಿಗೂ ತಮ್ಮ ಅಧಿಕಾರ ದರ್ಪದಿಂದ ನಿಸ್ಸಹಾಯಕ ಹೆಣ್ಣುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರಿಗೂ, ತಿಳಿದಿರಲಿ 

 

"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾ "ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ .ಎಲ್ಲಿ ಅವರನ್ನು ಪೀಡಿಸಿ ಬಲಾತ್ಕರಿಸಿ ಅವಮಾನಿಸುತ್ತಾರೆ ಅಲ್ಲಿ ಯಾರಿಗೂ ಯಶಸ್ಸು ದೊರೆಯುವುದಿಲ್ಲ .

 

 

 

 

"ಕಾರ್ಯೇಷು ದಾಸಿ ಕರುಣೇಶು ಮಂತ್ರಿ ಭೋಜೆ ಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭ ಕ್ಷಮಯಾಧರಿತ್ರಿ "ಈ ಎಲ್ಲಾ ಗುಣಗಳನ್ನು ಹೊಂದಿರುವ, ನಿಮ್ಮ ಮಡದಿಯಾಗಿ ಬರುವ , ನಿಮ್ಮ ಜೀವ ಜೀವನವನ್ನು ತುಂಬಲು ನಿಮ್ಮನ್ನು ಆದರಿಸಿ ಬರುವ ಹೆಣ್ಣನ್ನು ಗೌರವಿಸಿ ಅದೊಂದು ಭೋಗದ ವಸ್ತುವಲ್ಲ .ನಿಮ್ಮಂತೆ ಒಂದು ಜೀವ .

 

"ಮನೆ ಮನದ ದೀಪ ಉರಿಸಿ ,ಹೊತ್ತೊತ್ತಿಗೆ ಊಟ ಬಡಿಸಿ ,ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೇ ,ಸ್ತ್ರೀ ಎಂದರೆ ಅಷ್ಟೇ ಸಾಕೆ ".ಎಂದು ಮಹಾನ್ ಕವಿಗಳು ಆಡಿದ್ದಾರೆ .ಆದರೆ ನಮಗೆ ಯಾವ ಪಟ್ಟವೂ ಬೇಡ .ಕೀರ್ತಿಯೂ ಬೇಡ .ನಮ್ಮನ್ನು ಪದಗಳಲ್ಲಿ ವೈಭವೀಕರಿಸುವುದು ಬೇಡ .ನಮಗೆ ಬೇಕಿರುವುದು ಕೇವಲ ಈ ಹೆಣ್ಣು ಜನ್ಮವನ್ನು ಶಾಪವಾಗಿಸದೆ ವರವಾಗಿಸುವ ಮನುಷ್ಯತ್ವಮನುಷ್ಯತ್ವವನ್ನು ವುಳ್ಳ  ಮನಸ್ಸುಗಳು ಅಷ್ಟೇ .

 

 ರಮ್ಯ ರಾಗೌ

Enjoyed this article? Stay informed by joining our newsletter!

Comments

You must be logged in to post a comment.

About Author